ಬೆಂಗಳೂರು: ‘ಕಾವೇರಿ ಕೂಗು ಅಭಿಯಾನದ ಸಹಾಯದಿಂದ 1.25 ಲಕ್ಷ ರೈತರು ಮರ ಆಧಾರಿತ ಕೃಷಿ ಪದ್ದತಿಗೆ ಬದಲಾಗಿದ್ದಾರೆ. ಅವರ ಆದಾಯ ಮತ್ತು ಇಳುವರಿ ಹೆಚ್ಚಾಗಿದೆ. ಈ ಯಶಸ್ಸು ಭಾರತದಾದ್ಯಂತ ವಿಸ್ತರಿಸಬೇಕು’ ಎಂದು ನಟಿ ಜೂಹಿ ಚಾವ್ಲಾ ತಿಳಿಸಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಲಯಂ ಮೇವಾಣಿ ಗ್ರಾಮದ ರೈತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬರ ಅಥವಾ ವೈಯಕ್ತಿಕ ಸಮಸ್ಯೆಗಳಿಂದ ಪಾರಾಗಲು ತಮ್ಮ ಜಮೀನುಗಳನ್ನು ಮಾರಲು ನಿಶ್ಚಯಿಸಿದ್ದ ಅನೇಕ ರೈತರು ಕಾವೇರಿ ಕೂಗು ಅಭಿಯಾನದ ಕಾರಣದಿಂದ ಮರ ಆಧಾರಿತ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ಕಾವೇರಿ ಕೂಗು ಅಭಿಯಾನ ಆರಂಭವಾದ ಬಳಿಕ ರೈತರ ಆದಾಯ ಮತ್ತು ಇಳುವರಿ ಹೆಚ್ಚಾಗಿದೆ. ಆರ್ಥಿಕ ಸ್ಥಿತಿಯೊಂದಿಗೆ ಮಣ್ಣಿನ ಫಲವತ್ತತೆಯೂ ಹೆಚ್ಚಾಗಿದೆ’ ಎಂದರು.
ಈ ಅಭಿಯಾನದ ರೂವಾರಿಯಾದ ಸದ್ಗುರು ಅವರಿಗೆ ಧನ್ಯವಾದ ತಿಳಿಸಿರುವ ಅವರು, ‘ರೈತರ ಬದುಕಿನಲ್ಲಿ ಆಗಿರುವ ಪರಿವರ್ತನೆಯನ್ನು ಕಂಡು ನನಗೆ ಸದ್ಗುರುಗಳ ಮೇಲೆ ಇದ್ದ ಗೌರವ ಮತ್ತಷ್ಟು ಹೆಚ್ಚಾಗಿದೆ’ ಎಂದರು.
‘ನಾನು ನನ್ನ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಕಾವೇರಿ ಕೂಗು ಅಭಿಯಾನದ ಕುರಿತು ಬರೆಯುತ್ತಿರುತ್ತೇನೆ. ಇದರಿಂದ ಚಲನಚಿತ್ರ ಉದ್ಯಮದಲ್ಲಿಯೂ ಸಾಕಷ್ಟು ಅರಿವು ಮೂಡಿದೆ’ ಎಂದು ಹೇಳಿದರು.
’ನನ್ನ ಕಳೆದ ವರ್ಷದ ಹುಟ್ಟಹಬ್ಬದಂದು ನಾನೊಂದು ಮನವಿ ಮಾಡಿದ್ದೆ. ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಮರಗಳನ್ನು ನೆಡಿ, ಬೇರೆ ಇನ್ನಾವುದೇ ಉಡುಗೊರೆ ಕೊಡಬೇಡಿ' ಎಂದು ತಿಳಿಸಿದ್ದೆ. ನನ್ನ ಮಿತ್ರರು ಮತ್ತು ಅಭಿಮಾನಿಗಳು 30 ಸಾವಿರ ಸಸಿಗಳನ್ನು ನೆಡುವುದಕ್ಕೆ ಹಣ ಸಂಗ್ರಹಿಸಿದರು. ಇದರೊಂದಿಗೆ ಕಾವೇರಿ ಕೂಗಿಗಾಗಿ 1 ಲಕ್ಷ ಸಸಿಗಳನ್ನು ನೆಡುವುದಕ್ಕೆ ಹಣಗೂ
ಡಿಸುವ ನನ್ನ ಗುರಿ ಸಾಕಾರಗೊಳ್ಳುವಂತಿದೆ’ ಎಂದು ಉತ್ಸಾಹದಿಂದ ಹೇಳಿದರು.
ಕಾವೇರಿ ಕೂಗು ಅಭಿಯಾನದಡಿಯಲ್ಲಿ ಕಳೆದ ಎರಡು ವರ್ಷಗಳಿಂದ ತಮಿಳುನಾಡು ಮತ್ತು ಕರ್ನಾಟಕದ ರೈತರು 2.1 ಕೋಟಿ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ನೆಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.