ADVERTISEMENT

48 ಸಾವಿರ ಮನೆಗಳಿಗೆ 16ರಿಂದ ಕಾವೇರಿ: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 19:12 IST
Last Updated 14 ಅಕ್ಟೋಬರ್ 2024, 19:12 IST
ಉಲ್ಲಾಳು ಬಳಿಯ ಎ.ಜಿ.ಎಸ್ ಬಡಾವಣೆಯಲ್ಲಿ ಕಾವೇರಿ ನೀರಿನ ಪೈಪ್ ಅಳವಡಿಕೆ ಕಾಮಗಾರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು
ಉಲ್ಲಾಳು ಬಳಿಯ ಎ.ಜಿ.ಎಸ್ ಬಡಾವಣೆಯಲ್ಲಿ ಕಾವೇರಿ ನೀರಿನ ಪೈಪ್ ಅಳವಡಿಕೆ ಕಾಮಗಾರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು   

ರಾಜರಾಜೇಶ್ವರಿನಗರ: ‘ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 48 ಸಾವಿರ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಇದೇ 16ರಿಂದ ಪ್ರತಿ ಮನೆಗೂ ಕಾವೇರಿ ನೀರು ಹರಿಯಲಿದೆ’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಉಲ್ಲಾಳು ವಾರ್ಡ್‌ನ ಎ.ಜಿ.ಎಸ್ ಬಡಾವಣೆಯಲ್ಲಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೊಳವೆ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವರ್ಷದ ಹಿಂದೆಯೇ ಕಾವೇರಿ ನೀರು ಸಿಗಬೇಕಾಗಿತ್ತು. ಅರಣ್ಯ, ಮುಖ್ಯರಸ್ತೆ, ಖಾಸಗಿ ಜಮೀನು ಮಾಲೀಕರಿಂದ ತೊಂದರೆ ಕಾರಣ ವಿಳಂಬವಾಗಿತ್ತು. ಈಗ ಸಮಸ್ಯೆ ಬಗೆಹರಿದಿದ್ದು, 110 ಹಳ್ಳಿಗಳಿಗೂ ನೀರು ಸಿಗಲಿದೆ’ ಎಂದರು.

ADVERTISEMENT

ಬೆಂಗಳೂರು ಜಲಮಂಡಳಿ ಯೋಜನೆ ವಿಭಾಗದ ಕಾರ್ಯ ಪಾಲಕ ಎಂಜಿನಿಯರ್ ಮಂಜುನಾಥ್ ಮಾತನಾಡಿ, ‘ಕೆಲವು ಖಾಸಗಿ ಬಡಾವಣೆಯವರು (ಲೇಔಟ್ ಮಾಡಿದವರು) ಸರ್ಕಾರಕ್ಕೆ ಪಾವತಿಸಬೇಕಾದ ಹಣವನ್ನು ನೀಡದ ಕಾರಣ ಚಕ್ಕೆ ಗೌಡನಪಾಳ್ಯ, ಎ.ಜೆ.ಎಸ್.ಬಡಾವಣೆ, ಭರತ್ ನಗರ‌, ಆರ್‌.ಆರ್.ಲೇಔಟ್, ಉಲ್ಲಾಳು ವ್ಯಾಪ್ತಿಯಲ್ಲಿ ನೀರಿನ ಕೊಳವೆ ಅಳವಡಿಕೆ ವಿಳಂಬವಾಗಿದೆ. ಒಪ್ಪಿಗೆ ಪತ್ರ ಸಿಕ್ಕರೆ ಎಲ್ಲೆಡೆ ಕಾಮಗಾರಿ ಪ್ರಾರಂಭವಾಗಲಿದೆ. ಸರ್ಕಾರ 10 ಕಿ.ಮೀ ಕಾಮಗಾರಿಗೆ ಅನುಮತಿ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ನಿವೃತ್ತ ಕೆಎಎಸ್ ಅಧಿಕಾರಿ ಬಿ.ಕೃಷ್ಣಪ್ಪ, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಶ್ರೀಧರ್, ತಾ.ಪಂ. ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ರಮೇಶ್ ಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.