ಬೆಂಗಳೂರು: ‘ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ವಿಧಾನಸಭೆಯ ತುರ್ತು ಅಧಿವೇಶನ ಕರೆಯಬೇಕು’ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದರು.
ನಗರದಲ್ಲಿ ಗುರುವಾರ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ‘ನಮ್ಮ ನೀರು ನಮ್ಮ ಹಕ್ಕು ಚಿಂತನ ಮಂಥನ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ತುರ್ತು ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಕುರಿತು ಚರ್ಚಿಸಿ, ರಾಜ್ಯದ ಹಿತರಕ್ಷಣೆಗಾಗಿ ಸೂಕ್ತ ನಿರ್ಣಯವೊಂದನ್ನು ಕೈಗೊಳ್ಳಬೇಕು‘ ಎಂದು ಸಲಹೆ ನೀಡಿದರು.
ಸಮಿತಿಯ ಮುಖ್ಯಸ್ಥ ಕುರಬೂರು ಶಾಂತಕುಮಾರ್, ‘ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೇ ಬೆಳೆಗಳು ಬಾಡುತ್ತಿವೆ. ಆದರೂ, ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ನೀರಿನ ವ್ಯಾಪಾರ ಮಾಡುತ್ತಿದ್ದಾರೆ’ ಎಂದು ದೂರಿದರು.
‘ನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಸಂಕಷ್ಟ ಸೂತ್ರ ಜಾರಿಯಾಗುವರೆಗೂ ಪಾಲಿಸಬಾರದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರಗಾಲದ ಭೀತಿ ಎದುರಾಗಿದೆ. ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬೇಕು. ಜತೆಗೆ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು’ ಎಂದರು.
‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಗೊಳಿಸಬೇಕು. ಕಾವೇರಿ ಭಾಗದ ಎಲ್ಲ ರಾಜ್ಯಗಳ ನೀರಾವರಿ ತಜ್ಞರು, ವಿಷಯ ಪರಿಣಿತರನ್ನು ಒಳಗೊಂಡ ‘ಸ್ವತಂತ್ರ ನೀರು ನಿರ್ವಹಣಾ ಸಮಿತಿ’ ರಚಿಸಬೇಕು. ಕನ್ನಡಪರ, ರೈತಪರ ಸಂಘಟನೆಗಳ ಮುಖಂಡರ ಮೇಲಿರುವ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.
ವಿಚಾರಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಇದ್ದರು.
23ಕ್ಕೆ ಸಭೆ
‘ಕಾವೇರಿ ನೀರಿನ ವಿಚಾರದ ಬಗ್ಗೆ ರಾಜ್ಯದಾದ್ಯಂತ ಹೋರಾಟ ನಡೆಸಲು ಇದೇ 23ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಚಲನಚಿತ್ರ ನಟರು ವಕೀಲರ ಪರಿಷತ್ ಮತ್ತು ಉದ್ದಿಮೆದಾರರು ಕಾರ್ಮಿಕ ಮತ್ತು ಸಾರ್ವಜನಿಕ ಸಂಘಟನೆಗಳು ಭಾಗವಹಿಸಬೇಕು’ ಎಂದು ಕುರಬೂರು ಶಾಂತಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.