ADVERTISEMENT

ಬೆಂಗಳೂರು ತಲುಪಿದ ಕಾವೇರಿ 5ನೇ ಹಂತದ ನೀರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 19:33 IST
Last Updated 17 ಅಕ್ಟೋಬರ್ 2024, 19:33 IST
ರಾಮ್‌ ಪ್ರಸಾತ್ ಮನೋಹರ್‌
ರಾಮ್‌ ಪ್ರಸಾತ್ ಮನೋಹರ್‌   

ಬೆಂಗಳೂರು: ಕಾವೇರಿ ಐದನೇ ಹಂತದ ಯೋಜನೆಯಡಿ ಅಳವಡಿಸಿರುವ ಕೊಳವೆ ಮಾರ್ಗಗಳಲ್ಲಿ ಸರಬರಾಜು ಮಾಡಲಾದ ಕುಡಿಯುವ ನೀರು ಗುರುವಾರ ಸಂಜೆ ನಗರಕ್ಕೆ ತಲುಪಿದೆ.

ಬನಶಂಕರಿ 6ನೇ ಹಂತ, ಎಸ್‌ಎಂವಿ 6ನೇ ಹಂತ ಹಾಗೂ ಗೊಟ್ಟಿಗೆರೆ ಜಿಎಲ್‌ಆರ್‌ ಮೂಲಕ ಸರಬರಾಜು ಮಾಡಬೇಕಾದ ಪ್ರದೇಶಗಳಲ್ಲಿ ಗ್ರಾಹಕರಿಗೆ ಶುಕ್ರವಾರದಿಂದ ನೀರು ಪೂರೈಕೆ ಮಾಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ ನೀಡಿದ್ದಾರೆ.

ಕಾವೇರಿ ಐದನೇ ಹಂತದ ಯೋಜನೆ ಟಿ.ಕೆ. ಹಳ್ಳಿಯಲ್ಲಿ ಬುಧವಾರ ಲೋಕಾರ್ಪಣೆ ಆಗಿತ್ತು.  120 ಕಿ.ಮೀ. ದೂರದ ಬೆಂಗಳೂರಿಗೆ ಕೊಳವೆ ಮಾರ್ಗದ ಮೂಲಕ ನೀರು ಹರಿದು ಬಂದಿದೆ.

ADVERTISEMENT

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ರಾಮ್‌ ಪ್ರಸಾತ್‌ ಮಹೋಹರ್‌ ಗುರುವಾರ ಈ ಕುರಿತು ಮುಖ್ಯ ಎಂಜಿನಿಯರ್‌, ವಲಯಗಳ ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಸಭೆ ನಡೆಸಿದರು.

110 ಹಳ್ಳಿಗಳ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಸಂಪರ್ಕ ನೀಡಲಾಗಿದೆ. ಕಾವೇರಿ 4ನೇ ಹಂತದಲ್ಲಿ ಲಭ್ಯವಿದ್ದ ನೀರಿನಲ್ಲೇ ಈ ಸಂಪರ್ಕಗಳಿಗೆ ಆಗಾಗ ನೀರು ಸರಬರಾಜು ಮಾಡಲಾಗುತ್ತಿತ್ತು. ಹಲವಾರು ಹಳ್ಳಿಗಳಿಗೆ 10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಕಾವೇರಿ ಐದನೇ ಹಂತದಲ್ಲಿ ನೀರು ಪೂರೈಕೆ ಆರಂಭಗೊಂಡಿದೆ. 

ನಗರಕ್ಕೆ ಪ್ರತಿದಿನ 775 ದಶಲಕ್ಷ ಲೀಟರ್‌ನಷ್ಟು ನೀರು ಹೆಚ್ಚುವರಿಯಾಗಿ ದೊರಕುತ್ತಿದೆ. ಇದು ಸುಮಾರು 4 ಲಕ್ಷ ಸಂಪರ್ಕಗಳಿಗೆ ಹಾಗೂ 50 ಲಕ್ಷ ಜನರಿಗೆ ಸಾಕಾಗುತ್ತದೆ. ಆದರೆ, ಈಗ ಕೇವಲ 55 ಸಾವಿರ ಸಂಪರ್ಕಗಳಿವೆ. 150 ದಶಲಕ್ಷ ಲೀಟರ್‌ ನೀರು ಮಾತ್ರ ಸಾಕಾಗುತ್ತಿದ್ದು, ಅಷ್ಟನ್ನೇ ಪಂಪ್‌ ಮಾಡಲಾಗುತ್ತಿದೆ ಎಂದರು.

ಕಾವೇರಿ ನೀರಿನ ಸಂಪರ್ಕ ಪಡೆಯಲು ಅಧಿಕಾರಿಗಳು ಜನರ ಮನವೊಲಿಸಬೇಕು. 110 ಹಳ್ಳಿಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸಿಎಂಸಿ ಕೋರ್‌ ವಲಯಗಳಂತೆ ರೊಟೇಷನ್‌ ಷೆಡ್ಯೂಲ್‌ ರಚಿಸಬೇಕು. ಅದರಂತೆ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.