ಬೆಂಗಳೂರು: ‘ರಾಜ್ಯದಲ್ಲಿ ಬರ ಇದ್ದಾಗಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದೇಕೆ ಎಂಬ ಬಗ್ಗೆ ರಾಜ್ಯದ ಜನರಿಗೆ ಉತ್ತರಿಸಬೇಕು’ ಎಂದು ಶಾಸಕ ಸತೀಶ್ ರೆಡ್ಡಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಭಾನುವಾರ ಎಚ್ಎಸ್ಆರ್ ಬಡಾವಣೆಯ ಪರಂಗಿಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
‘ಮಳೆ ಕೊರತೆಯಿಂದಾಗಿ ಅಂತರ್ಜಲ ಕುಸಿದಿದ್ದರೂ ತಮಿಳುನಾಡಿಗೆ ನೀರು ಬಿಡುವ ಅವಸರ ಏನಿತ್ತು’ ಎಂದು ಪ್ರಶ್ನಿಸಿದ ಅವರು, ‘ಡಿಎಂಕೆ ಪಕ್ಷವು ಇಂಡಿಯಾ ಮೈತ್ರಿಕೂಟದ ಭಾಗವಾಗಿರುವುದರಿಂದ ಅವರನ್ನು ಮೆಚ್ಚಿಸಲು ನೀರು ಬಿಡಲಾಗಿದೆ’ ಎಂದು ಆರೋಪಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ ‘ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಎಂದೂ ಅವರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ. ಭಾರತ ರತ್ನ ಪ್ರಶಸ್ತಿಯನ್ನು ನೆಹರೂ ಕುಟುಂಬವು ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿತ್ತು. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಬೇಕೆಂಬ ಇಚ್ಛೆಯೂ ಕಾಂಗ್ರೆಸ್‌ಗೆ ಇರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಬಂದಾಗ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಾಯಿತು. ಮಾತ್ರವಲ್ಲ, ಅಂಬೇಡ್ಕರ್ ಇದ್ದ ಮನೆಯ ಜಾಗವನ್ನು ಮ್ಯೂಸಿಯಂ ಮಾಡಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ’ ಎಂದರು.
ಬಿಜೆಪಿ ಪ್ರಣಾಳಿಕೆಯು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವ ದೂರದೃಷ್ಟಿ ಹೊಂದಿದೆ. ಸಮಗ್ರ ಅಭಿವೃದ್ಧಿಯ ಹಲವು ಯೋಜನೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ದೇಶವನ್ನು ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸುವುದು ಮೋದಿ ಕನಸಾಗಿದೆ’ ಎಂದರು.
ಎಚ್‌ಡಿಕೆ ಹೇಳಿಕೆ ಸಮರ್ಥನೆ: ‘ಗ್ಯಾರಂಟಿ’ ಕುರಿತು ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿದ ತೇಜಸ್ವಿ ಸೂರ್ಯ, ‘ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಗೊಂದಲ ಇದೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ, ಬದಲಾಗಿ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿ ಹೇಳಿಕೆ ನೀಡಿಲ್ಲ. ಆದರೆ ಅವರ ಹೇಳಿಕೆಯನ್ನು ತಿರುಚಿ, ಕಾಂಗ್ರೆಸ್ ಇದನ್ನು ದುರುಪಯೋಗಪಡಿಸಿಕೊಳ್ಳುವ ಮಸಲತ್ತು ನಡೆಸಿದೆ’ ಎಂದು ಆರೋಪಿಸಿದರು.
ಇದೇ ವೇಳೆ ಪರಂಗಿಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನವನ್ನು ಲೋಕಾರ್ಪಣೆ ಮಾಡಲಾಯಿತು. ಬಿಜೆಪಿ ಬೆಂಗಳೂರು ದಕ್ಷಿಣ ಉಪಾಧ್ಯಕ್ಷ ಅಶ್ವಥ್, ಮಾಜಿ ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ, ಬಿಜೆಪಿ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ಎಂ.ರಮೇಶ್, ಅಂಬೇಡ್ಕರ್ ಸಂಘದ ಅದ್ಯಕ್ಷ ಸುನಂದಪ್ಪ, ಮುಖಂಡಾರದ ಮುನಿರಾಜು, ಶ್ರೀನಿವಾಸ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.