ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಕಾವೇರಿ ನೀರಿನ ಹೊಸ ಸಂಪರ್ಕವನ್ನು ಪಡೆಯಬಹುದು.
‘ಜಲಮಂಡಳಿಯ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಮಂಡಳಿಯ ಸಮೀಪದ ವಲಯ ಕಚೇರಿಯಲ್ಲಿ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ‘ಸಕಾಲ’ ನಿಯಮದಂತೆ ಶುಲ್ಕ ಸಹಿತ ಅರ್ಜಿ ಸ್ವೀಕರಿಸಿದ 15 ರಿಂದ 45 ದಿನಗಳಲ್ಲಿ ನೀರಿನ ಸಂಪರ್ಕವನ್ನು ನೀಡಲಾಗುವುದು’ ಎಂದು ಜಲಮಂಡಳಿಯ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.
110 ಹಳ್ಳಿಗಳ ವ್ಯಾಪ್ತಿಯಲ್ಲಿ ಈಗಾಗಲೇ 55 ಸಾವಿರ ಸಂಪರ್ಕಗಳನ್ನು ನೀಡಲಾಗಿದ್ದು, ವಾರಕ್ಕೆ ಕೆಲವೆಡೆ ಹತ್ತು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇನ್ನು ಮುಂದೆ, ನೀರು ಬಿಡುವ ಅಂತರ ಕಡಿಮೆ ಆಗಲಿದೆ. ಅಂದರೆ ಎರಡು ಅಥವಾ ಮೂರು ದಿನಗಳಿಗೆ ಒಮ್ಮೆ ನೀರು ಬಿಡಬಹುದು ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.
ಕೊಳವೆಗಳ ಜಾಲ ಪರಿಶೀಲನೆ
ರಾಜ್ಯ ಸರ್ಕಾರದ ಅನುದಾನದಿಂದ 2018ರಲ್ಲೇ ‘ನೀರು ವಿತರಣಾ ಜಾಲದ ಕೊಳವೆ’ಗಳನ್ನು ಅಳವಡಿಸಲಾಗಿದೆ. ಆ ನಂತರದಲ್ಲಿ ‘ಜೈಕಾ’ (ಜಪಾನ್ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿ) ಆರ್ಥಿಕ ನೆರವಿನಿಂದ ಏಳು ಭಾಗಗಳಲ್ಲಿ ನೆಲದಡಿ ಜಲಸಂಗ್ರಹಗಾರ (ಜಿಎಲ್‌ಆರ್) ನಿರ್ಮಿಸಲಾಗಿದೆ. ಈ ಜಿಎಲ್‌ಆರ್‌ಗಳಿಂದ ನೀರು ವಿತರಣಾ ಕೊಳವೆಗಳ ಜಾಲದ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಅಳವಡಿಸಿರುವ ಕೊಳವೆಗಳ ಪರಿಶೀಲನೆಯೂ ಈಗಾಗಲೇ ನಡೆಯುತ್ತಿದೆ.
‘ಕಾವೇರಿ ನೀರಿನ ಹೊಸ ಸಂಪರ್ಕಕ್ಕಾಗಿ ಯಾವುದೇ ಏಜೆನ್ಸಿಗಳನ್ನು/ಏಜೆಂಟ್‌ಗಳನ್ನು ನೇಮಿಸಿಲ್ಲ. ಜಲಮಂಡಳಿಯಿಂದ ಪರವಾನಗಿ ಪಡೆದಿರುವ ಪ್ಲಂಬರ್‌ಗಳಿದ್ದಾರೆ. ಅವರಲ್ಲಿ ಕೆಲವರು ಅರ್ಜಿ ತೆಗೆದುಕೊಳ್ಳುತ್ತಾರೆ. ಆದರೆ, ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಿದ್ದೇವೆ’ ಎಂದು ರಾಮ್‌ಪ್ರಸಾತ್ ಮನೋಹರ್ ಸ್ಪಷ್ಟಪಡಿಸಿದರು.
ಅಪಾರ್ಟ್‌ಮೆಂಟ್‌ಗಳಿಗೂ ನೀರು
‘ಅಪಾರ್ಟ್‌ಮೆಂಟ್‌ನವರೂ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು. ತ್ಯಾಜ್ಯ ನೀರು ಸಂಸ್ಕರಣಾ (ಎಸ್‌ಟಿಪಿ) ಘಟಕವಿರುವ ಹಾಗೂ ಸಂಸ್ಕರಿಸಿದ ಶೇ 30 ರಿಂದ 40 ರಷ್ಟು ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಅಪಾರ್ಟ್ ಮೆಂಟ್‌ಗಳಿಗೆ ಮಾತ್ರ, ಕಾವೇರಿ ನೀರು ಪೂರೈಸಲಾಗುತ್ತದೆ. ಈ ಅಪಾರ್ಟ್‌ಮೆಂಟ್‌ಗಳಿಗೆ ಒಂದು ಚದರ ಮೀಟರ್‌ಗೆ ₹400ರಂತೆ (ವಾಣಿಜ್ಯ ಉದ್ದೇಶಕ್ಕೆ ₹600) ಪ್ರೊರೇಟಾ ಶುಲ್ಕವನ್ನು ವಿಧಿಸಲಾಗುತ್ತದೆ’ ಎಂದು ವಿವರಿಸಿದರು.
ನೀರಿನ ಸಂಪರ್ಕ: ನೆರವಿಗೆ ಸಹಾಯ ಕೇಂದ್ರ
ಕಾವೇರಿ 5ನೇ ಹಂತ ಯೋಜನೆಯಡಿ ನೀರು ಪೂರೈಕೆಯಾಗುವ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ‘ಕಾವೇರಿ ನೀರಿನ ಸಂಪರ್ಕ ಅಭಿಯಾನ’ ನಡೆಸಲಾಗುತ್ತಿದೆ.
‘ಹೊಸದಾಗಿ ಕಾವೇರಿ ನೀರಿನ ಸಂಪರ್ಕ ಪಡೆಯುವ ವಿಧಾನ, ಹಾಗೂ ನೀರನ್ನು ಬಳಸುವ ಕುರಿತು ಜನರಲ್ಲಿ ಅರಿವು ಮೂಡಿಲಾಗುತ್ತದೆ. ಅಭಿಯಾನದಲ್ಲಿ ಸಹಾಯ ಕೇಂದ್ರವನ್ನೂ ತೆರೆಯಲಾಗುತ್ತದೆ. ಅಲ್ಲಿ, ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ. ಹೆಚ್ಚು ಜನ ಬಂದರೆ ಅರ್ಜಿ ಸಂಗ್ರಹಿಸಿಕೊಂಡು ನಂತರ ಜಲಮಂಡಳಿ ಸಿಬ್ಬಂದಿ ಆನ್‌ಲೈನ್‌ಲ್ಲಿ ದಾಖಲಿಸುತ್ತಾರೆ. ಕಡಿಮೆ ಜನ ಇದ್ದರೆ, ಸ್ಥಳದಲ್ಲೇ ಆನ್‌ಲೈನ್‌ನಲ್ಲಿ ಅರ್ಜಿ ದಾಖಲಿಸುತ್ತಾರೆ’ ಎಂದು ರಾಮ್‌ಪ್ರಸಾತ್ ತಿಳಿಸಿದರು.
ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವಾರದಿಂದ ಅಭಿಯಾನ ಆರಂಭಿಸುವ ಯೋಜನೆ ಇದೆ. ಈ ಕುರಿತು ಸದ್ಯದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://owc.bwssb.gov.in/consumer
ಮನೆಯ ಮಾಲೀಕರು ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ
ಇ–ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ
ಶುಲ್ಕ ಪಾವತಿಸಿ ಅರ್ಜಿ ಪಡೆಯಿರಿ
ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅಗತ್ಯ ದಾಖಲಾತಿಗಳು
ನಿವೇಶನದ ಕ್ರಯಪತ್ರ ಖಾತಾ ಪ್ರಮಾಣ ಪತ್ರ
ಕಟ್ಟಡದ ನಕ್ಷೆ/ ಅನುಮೋದನೆಗೊಂಡಿರುವ ನಕ್ಷೆ ಮಾಲೀಕರೊಂದಿಗಿರುವ ಕಟ್ಟಡದ ಛಾಯಾಚಿತ್ರ 1200 ಚ.ಅಡಿ ಮತ್ತು ಮೇಲ್ಪಟ್ಟ ವಿಸ್ತೀರ್ಣದ ಮನೆಆಗಿದ್ದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿರುವುದಕ್ಕೆ ದಾಖಲೆ.
ಸೂಚನೆ: ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.