ನವದೆಹಲಿ: ಶೋಧದ ನೆಪದಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರ ಕಂಪನಿ ಮೇಲೆ ದಾಳಿ ನಡೆಸಿ ಅವರಿಂದ ಹಣ ಸುಲಿಗೆ ಮಾಡಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಜಿಎಸ್‌ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ದಕ್ಷಿಣ ವಲಯದ ಅಧೀಕ್ಷಕ ಅಭಿಷೇಕ್, ಹಿರಿಯ ಗುಪ್ತಚರ ಅಧಿಕಾರಿಗಳಾದ ಮನೋಜ್ ಸೈನಿ, ನಾಗೇಶ್ ಬಾಬು ಹಾಗೂ ಗುಪ್ತಚರ ಅಧಿಕಾರಿ ಸೋನಾಲಿ ಸಹಾಯ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಶುಕ್ರವಾರ ತಿಳಿಸಿದೆ.
ಜೀವನ್ ಬಿಮಾನಗರದ ಜಿ.ಎಂ. ಪಾಳ್ಯದಲ್ಲಿ ನೆಲೆಸಿರುವ ಉದ್ಯಮಿ ಕೇಶವ್ ತಕ್ ಅವರಿಂದ ₹1.5 ಕೋಟಿ ಸುಲಿಗೆ ಮಾಡಿದ ಆರೋಪ ಈ ಅಧಿಕಾರಿಗಳ ಮೇಲಿದೆ. ಉದ್ಯಮಿ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 11ರಂದು ಬೆಂಗಳೂರು ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಈ ಅಧಿಕಾರಿಗಳನ್ನು ಬಂಧಿಸಿತ್ತು.
‘ಉದ್ಯಮಿಯನ್ನು ಅಪಹರಿಸಿ ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ’ ಎಂದು ಸಿಬಿಐಸಿ ‘ಎಕ್ಸ್’ನಲ್ಲಿ ತಿಳಿಸಿದೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪೊಲೀಸರ ತನಿಖೆಯ ಫಲಿತಾಂಶ ಆಧರಿಸಿ ಅಧಿಕಾರಿಗಳ ವಿರುದ್ಧ ಮುಂದಿನ ಹಂತದ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದೆ.
ಪಾರದರ್ಶಕ ಹಾಗೂ ವ್ಯಾಪಾರ ಸ್ನೇಹಿ ತೆರಿಗೆ ಆಡಳಿತಕ್ಕೆ ಮಂಡಳಿಯು ಒತ್ತು ನೀಡಲಿದೆ. ಹಾಗಾಗಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಬದ್ಧ ಎಂದು ಹೇಳಿದೆ.
ಇ.ಡಿಯಿಂದ ಪ್ರತ್ಯೇಕ ಪ್ರಕರಣ ದಾಖಲು
ನಾಲ್ವರು ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ನಡಿ (ಪಿಎಂಎಲ್‌ಎ) ಸಿಸಿಬಿ ಪೊಲೀಸರು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.