ಬೆಂಗಳೂರು: ರಾಜಧಾನಿಯಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಟಿ.ನಾಸೀರ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿಸಿಬಿಗೆ ಅನುಮತಿ ಸಿಕ್ಕಿದೆ. ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಕರೆ ತರಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
‘2008ರ ಸರಣಿ ಬಾಂಬ್ ಸ್ಪೋಟದ ಆರೋಪಿಯೂ ಆಗಿರುವ ಟಿ.ನಾಸೀರ್ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ. ಈ ಪ್ರಕರಣದಲ್ಲೂ ಈತ ಪ್ರಮುಖ ಆರೋಪಿ. ನಾಸೀರ್‌ನನ್ನು ಗುರುವಾರ ನ್ಯಾಯಾಧೀಶರ ಎದುರು ಹಾಜರು ಪಡಿಸಿ, ಸಿಸಿಬಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಮೂಲಗಳು ಹೇಳಿವೆ.
‘ಕೊಲೆ ಪ್ರಕರಣದಲ್ಲಿ ಜುನೇದ್ ಹಾಗೂ ಆತನ ಸಹಚರರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ, ಮಹಮ್ಮದ್ ಊಮರ್ ಪರಪ್ಪನ ಅಗ್ರಹಾರದ ಜೈಲು ಸೇರಿದ್ದರು. ಅವರಿಗೆ ನಾಸೀರ್ ಜೈಲಿನೊಳಗೆ ಸ್ಫೋಟಕ್ಕೆ ತರಬೇತಿ ನೀಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆತನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದು ಸಿಸಿಬಿ ಪೊಲೀಸರು ಹೇಳಿದರು.
ಬಂಧಿತ ಐವರು ಶಂಕಿತ ಉಗ್ರರ ಏಳು ದಿನಗಳ ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ ಮತ್ತಷ್ಟು ಕಾಲಾವಕಾಶ ನೀಡುವಂತೆ ತನಿಖಾಧಿಕಾರಿಗಳು ಕೇಳಿದ್ದರಿಂದ ನ್ಯಾಯಾಧೀಶ ಗಂಗಾಧರ ಅವರು ಮತ್ತೆ 10 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದರು.
2ನೇ ಆರೋಪಿ ಜುನೇದ್ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಿ ಕರೆ ತರಲು ಸಿದ್ದತೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.