ADVERTISEMENT

ಹಳೇ ರೌಡಿಗಳ ಮನೆ ಜಾಲಾಡಿದ ಸಿಸಿಬಿ

ಒಂಟೆ, ಸೈಲೆಂಟ್, ಬಾಕ್ಸರ್, ತೊದಲನ ಮನೆಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 20:12 IST
Last Updated 19 ಡಿಸೆಂಬರ್ 2018, 20:12 IST

ಬೆಂಗಳೂರು: ಕುಖ್ಯಾತ ರೌಡಿಗಳು, ಭೂಗಳ್ಳರು, ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಪಿಸ್ತೂಲನ್ನು ಜಪ್ತಿ ಮಾಡಿದ್ದಾರೆ.

ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆಗಿಳಿದ ಎಂಟು ತಂಡಗಳು ಯಲಹಂಕ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಅಮೃತಹಳ್ಳಿ, ಬಾಗಲೂರು, ರಾಮಮೂರ್ತಿನಗರ, ಕೆ.ಜಿ.ಹಳ್ಳಿ, ಹಾಗೂ ಬಾಣಸವಾಡಿ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿಗಳ ಮನೆಗಳನ್ನು ಜಾಲಾಡಿದರು.

‘ಸುನೀಲ್ ಅಲಿಯಾಸ್ ಸೈಲೆಂಟ್ ಸುನೀಲ, ರೋಹಿತ್ ಅಲಿಯಾಸ್ ಒಂಟೆ, ವೇಡಿಯಪ್ಪ ಅಲಿಯಾಸ್ ಮಾರ್ಕೆಟ್ ವೇಡಿ, ಮಂಜುನಾಥ್ ಅಲಿಯಾಸ್ ತೊದಲ, ಭರತ್ ಅಲಿಯಾಸ್ ಬಂಗಾರಿ, ನಾಗರಾಜ್ ಅಲಿಯಾಸ್ ಬಾಕ್ಸರ್ ನಾಗ, ಪಿ.ಎಸ್.ಜಯಕುಮಾರ್ ಸೇರಿದಂತೆ ಹತ್ತಕ್ಕೂ ಹೆಚ್ಚು ರೌಡಿಗಳ ಮನೆಗಳಲ್ಲಿ ಶೋಧ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ. ಬಾಕ್ಸರ್‌ ನಾಗನ ಮನೆಯಲ್ಲಿ ಪಿಸ್ತೂಲ್ ಹಾಗೂ ಆರು ಗುಂಡುಗಳು ಸಿಕ್ಕಿವೆ’ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

19 ಗುಂಡುಗಳು ನಾಪತ್ತೆ: ‘ಬಾಕ್ಸರ್ ನಾಗನ ವಿರುದ್ಧ 2004ರ ನಂತರ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಪಿಸ್ತೂಲ್ ಹಾಗೂ 25 ಗುಂಡುಗಳನ್ನು ಇಟ್ಟುಕೊಳ್ಳಲು ಆತ 2011ರಲ್ಲಿ ಪರವಾನಗಿ ಪಡೆದಿದ್ದ. ಆದರೆ, ಈಗ ಕೇವಲ ಆರು ಗುಂಡುಗಳು ಮಾತ್ರ ಸಿಕ್ಕಿವೆ. ಇನ್ನೂ 19 ಗುಂಡುಗಳು ಎಲ್ಲಿ ಹೋದವು ಹಾಗೂ ಪಿಸ್ತೂಲ್‌ ಲೈಸೆನ್ಸ್ ಸಿಕ್ಕ ನಂತರ ಆತ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದನೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಲೋಕ್ ಮಾಹಿತಿ ನೀಡಿದರು.

‘ಹಳೆ ರೌಡಿಗಳು ಈಗ ಮಚ್ಚು–ಲಾಂಗು ಹಿಡಿದು ಸುಲಿಗೆ ಮಾಡುತ್ತಿಲ್ಲ. ಬದಲಾಗಿ, ರಿಯಲ್ ಎಸ್ಟೇಟ್ ಹಾಗೂ ಬಡ್ಡಿ ವ್ಯವಹಾರದ ಮೂಲಕ ದರ್ಬಾರ್ ನಡೆಸುತ್ತಿದ್ದಾರೆ. ತಾವು ರಸ್ತೆಗೆ ಇಳಿಯದೆ, ಹುಡುಗರನ್ನು ಮುಂದೆ ಬಿಟ್ಟು ದಂಧೆ ನಡೆಸುತ್ತಿದ್ದಾರೆ. ಅಂಥವರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ. ದಾಳಿ ವೇಳೆ ಜಯಕುಮಾರ್ ಹಾಗೂ ಬಾಕ್ಸರ್ ನಾಗ ಹೊರತುಪಡಿಸಿ ಉಳಿದವರ‍್ಯಾರು ಮನೆಯಲ್ಲಿರಲಿಲ್ಲ’ ಎಂದರು.

ಕೋಡ್‌ವರ್ಡ್‌ ವ್ಯವಹಾರ

‘ವೇಡಿಯಪ್ಪ ತನ್ನ ಎಲ್ಲ ವ್ಯವಹಾರಗಳ ಮಾಹಿತಿಯನ್ನೂ ಕೋರ್ಡ್‌ ವರ್ಡ್‌ಗಳಲ್ಲಿ ಬರೆದಿಟ್ಟಿದ್ದಾನೆ. ಅದನ್ನು ಡಿ–ಕೋಡ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆತನ ಡೈರಿಯಲ್ಲಿ ಕೆಲ ಹೆಸರುಗಳೂ ಪತ್ತೆಯಾಗಿದ್ದು, ಅವರನ್ನೆಲ್ಲ ಕರೆಸಿ ವಿಚಾರಣೆ ಮಾಡಲಾಗುತ್ತಿದೆ’ ಎಂದು ಡಿಸಿಪಿ ಎಸ್.ಗಿರೀಶ್ ಹೇಳಿದರು.

ಶಿರಡಿ ಶೂಟೌಟ್‌ ಆರೋಪಿ ಮೇಲೂ ನಿಗಾ

‘2015ರಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರು ಶಿರಡಿಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಆ ಕೊಲೆಗೂ, ಕೆ.ಆರ್.ಪುರದ ರೌಡಿಯೊಬ್ಬನಿಗೂ ಸಂಬಂಧಿವಿದೆ. ಇಲ್ಲಿನ ಸ್ಥಳೀಯ ಪೊಲೀಸರನ್ನು ತನ್ನ ಮುಲಾಜಿಗೆ ಬೀಳಿಸಿಕೊಂಡ ಆ ರೌಡಿ, ಕೆ.ಆರ್.ಪುರ ಭಾಗದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ದಂಧೆಗಳನ್ನು ನಡೆಸುತ್ತಿದ್ದಾನೆ. ಈ ಬಗ್ಗೆ ಹಲವು ದೂರುಗಳು ಸಿಸಿಬಿಗೆ ಬಾಗಿಲಿಗೆ ಬಂದಿವೆ. ಹೀಗಾಗಿ, ಆತನ ಚಲನವಲನಗಳ ಮೇಲೂ ನಿಗಾ ಇಟ್ಟಿದ್ದೇವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.