ADVERTISEMENT

ನ್ಯಾಯಾಲಯ ಶ್ಯೂರಿಟಿಗೆ ನಕಲಿ ದಾಖಲೆ: 9 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 15:41 IST
Last Updated 14 ಡಿಸೆಂಬರ್ 2023, 15:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಶ್ಯೂರಿಟಿಗೆ ನೀಡುತ್ತಿದ್ದ ಆರೋಪದಡಿ ಮಹಿಳೆ ಸೇರಿ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ. ನಗರದ ದಿಣ್ಣೂರು ಮುಖ್ಯರಸ್ತೆಯ ನಿವಾಸಿ ತಬಸ್ಸುಮ್ (38), ರಾಯಚೂರು ಜಿಲ್ಲೆಯ ಜಾನಕಲ್‌ನ ವೀರೇಶ್ (37), ನಾಗೋಲಿಯ ಅಮರೇಶ್ (38), ಕೊಪ್ಪಳ ಜಿಲ್ಲೆಯ ಕೆಸರಹಟ್ಟಿಯ ಜೆ. ಉಮೇಶ್‌ಕುಮಾರ್ (48), ಕುಣಿಕೇರಿಯ ಸಂತೋಷ್ (29), ಬೆಂಗಳೂರು ಮಾದಾವರ ನಂದೀಶ್ವರ ಬಡಾವಣೆಯ ಪ್ರಕಾಶ್ (42), ಮೈಸೂರು ನಂಜನಗೂಡಿನ ಉಮೇಶ್ (49), ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಜಿ. ನಾಗರಾಜ್ ಅಲಿಯಾಸ್ ಸೋಡಾ (46) ಹಾಗೂ ಗುಂಟುಪಲ್ಲಿಯ ಮಂಜುನಾಥ್ (48) ಬಂಧಿತರು.

ADVERTISEMENT

‘ಮೈಸೂರು ಬ್ಯಾಂಕ್ ವೃತ್ತದ ಪಾದಚಾರಿ ಮಾರ್ಗದಲ್ಲಿ ಕುಳಿತುಕೊಳ್ಳುತ್ತಿದ್ದ ಆರೋಪಿಗಳು, ನಕಲಿ ದಾಖಲೆಗಳನ್ನು ಮಾರುತ್ತಿದ್ದರು. ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುತ್ತಿದ್ದ ಆರೋಪಿಗಳು, ಇವರ ಬಳಿ ನಕಲಿ ದಾಖಲೆಗಳನ್ನು ಖರೀದಿಸುತ್ತಿದ್ದರು. ಅದೇ ದಾಖಲೆಗಳನ್ನು ಆರೋಪಿಗಳು, ನ್ಯಾಯಾಲಯಕ್ಕೆ ಶ್ಯೂರಿಟಿಯಾಗಿ ನೀಡುತ್ತಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ನಕಲಿ ದಾಖಲೆಗಳ ಸೃಷ್ಟಿ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ವಿಶೇಷ ತಂಡ ರಚಿಸಿ ಡಿ. 12ರಂದು ಕಾರ್ಯಾಚರಣೆ ನಡೆಸಿ, ಪುರಾವೆ ಸಮೇತ 9 ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿವೆ.

ಒಂದೇ ಹೆಸರಿನಲ್ಲಿ ಹಲವು ಆಧಾರ್: ‘ನಕಲಿ ಆಧಾರ್, ಪಹಣಿ, ಸೇಲ್ ಡೀಡ್, ಮ್ಯೂಟೇಷನ್ ಹಾಗೂ ಇತರೆ ದಾಖಲೆಗಳು ಆರೋಪಿಗಳ ಬಳಿ ಸಿಕ್ಕಿವೆ. ಒಂದೇ ಹೆಸರಿನಲ್ಲಿ ಹಲವು ಆಧಾರ್ ಪತ್ತೆಯಾಗಿವೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ವ್ಯಕ್ತಿಯೊಬ್ಬರ ಆಧಾರ್ ಸ್ಕ್ಯಾನ್ ಮಾಡಿರುವ ಆರೋಪಿಗಳು, ಒಂದೇ ’ಆಧಾರ್‌’ನಲ್ಲಿ ಹಲವು ಬಾರಿ ಫೋಟೊ, ಹೆಸರು, ಸಂಖ್ಯೆ, ವಿಳಾಸ ಬದಲಾಯಿಸಿದ್ದರು. ಇದೇ ರೀತಿಯಲ್ಲಿ ಒಂದೇ ಹೆಸರಿನಲ್ಲಿ ಹೆಚ್ಚು ’ಆಧಾರ್’ ಸೃಷ್ಟಿಸಿದ್ದಾರೆ. ಇವುಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದರು.’

‘ಯಾರದ್ದೂ ಆಸ್ತಿ ಹೆಸರಿನಲ್ಲಿ ನಕಲಿ ಪಹಣಿ, ಸೇಲ್ ಡೀಡ್, ಮ್ಯೂಟೇಷನ್ ಪ್ರಮಾಣ ಪತ್ರಗಳನ್ನೂ ಆರೋಪಿಗಳು ಸೃಷ್ಟಿಸಿದ್ದರು. 9 ಆರೋಪಿಗಳ ಜೊತೆ ಮತ್ತಷ್ಟು ಮಂದಿ ಶಾಮೀಲಾಗಿರುವ ಶಂಕೆ ಇದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.