ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ಬೆಳಿಗ್ಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ₹40 ಸಾವಿರ ನಗದು, ಮೂರು ಚಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಕೊಲೆಗೆ ಸುಪಾರಿ, ಉಗ್ರ ಚಟುವಟಿಕೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಮತದಾರರ ಮೇಲೆ ಪ್ರಭಾವ ಬೀರಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಳಿಗ್ಗೆ 8 ಗಂಟೆಗೆ ಸುಮಾರು 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳ ತಂಡ ಜೈಲಿನ ಎಲ್ಲ ಬ್ಯಾರಕ್‌ಗಳ ಮೇಲೆ ದಾಳಿ ನಡೆಸಿದ್ದು, ಬ್ಯಾರಕ್‌ನಲ್ಲಿದ್ದ ಕೈದಿಗಳ ಬಳಿಯಿಂದ ನಗದು ವಶಪಡಿಸಿಕೊಳ್ಳಲಾಗಿದೆ.’
‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿರುವ ಕೆಲವು ರೌಡಿಶೀಟರ್‌ಗಳು ತಮ್ಮ ಸಹಚರರ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಮಾಹಿತಿ ಸಿಕ್ಕಿತ್ತು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯಬಾರದೆಂಬ ಉದ್ದೇಶದಿಂದ ದಾಳಿ ನಡೆಸಲಾಗಿದೆ. ಜೈಲಿನಲ್ಲಿ ಮೂರು ಚಾಕು ಹಾಗೂ ನಗದು ಪತ್ತೆಯಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.