ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ದಿಢೀರ್ ದಾಳಿ ನಡೆಸಿದರು.
ಕೈದಿಗಳಿಗೆ ಮಾದಕ ವಸ್ತು ಪೂರೈಕೆ, ಮೊಬೈಲ್ ಬಳಕೆ ಸೇರಿ ಕೆಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪದ ಮೇಲೆ ಪೊಲೀಸರು ಪರಿಶೀಲನೆ ನಡೆಸಿದರು.
ಶ್ವಾನ ದಳ ಸಹಿತ ಸಿಸಿಬಿಯ ಸುಮಾರು 40ಕ್ಕೂ ಅಧಿಕ ಅಧಿಕಾರಿ–ಸಿಬ್ಬಂದಿ ಜೈಲಿನ ಮೇಲೆ ದಾಳಿ ನಡೆಸಿ, ಪ್ರತಿ ಬ್ಯಾರಕ್‌ಗಳನ್ನು ತಪಾಸಣೆ ಮಾಡಿದರು.
‘ರೌಡಿಗಳಾದ ಸುನೀಲ್, ವಿಲ್ಸನ್ ಗಾರ್ಡನ್ ನಾಗ ಸೇರಿ ಹಲವು ರೌಡಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೌಡಿಗಳು ಮೊಬೈಲ್ ಮೂಲಕ ಹೊರಗಡೆ ಸಂಪರ್ಕ ಸಾಧಿಸಿ ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಮೊಬೈಲ್, ಮಾರಕಾಸ್ತ್ರ, ಮಾದಕ ಪದಾರ್ಥ ಸೇರಿ ಹಲವು ವಸ್ತುಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಯಿತು. ಜೈಲಿನಲ್ಲಿ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.
ವಿಚಾರಣಾಧೀನ ಕೈದಿಯೊಬ್ಬ ಮನೆಯೂಟಕ್ಕೆ ಅವಕಾಶ ನೀಡುವಂತೆ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಕೀಲರೊಬ್ಬರು, ಪರಪ್ಪನ ಅಗ್ರಹಾರ ಸೇರಿ ರಾಜ್ಯದ ಜೈಲುಗಳಲ್ಲಿ ಗನ್, ಮಾದಕ ವಸ್ತು ಸೇರಿ ಎಲ್ಲ ನಿಷೇಧಿತ ವಸ್ತುಗಳು ಸಿಗುತ್ತವೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.