ADVERTISEMENT

ಎಂ.ಎಸ್‌. ರಾಮಯ್ಯ ಜನ್ಮ ಶತಮಾನೋತ್ಸವ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಗಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 15:47 IST
Last Updated 27 ಫೆಬ್ರುವರಿ 2023, 15:47 IST
ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್‌. ಜಯರಾಮ್ ಮತ್ತು ಉಪಾಧ್ಯಕ್ಷ ಎಂ.ಆರ್.ಸೀತಾರಾಂ.
ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್‌. ಜಯರಾಮ್ ಮತ್ತು ಉಪಾಧ್ಯಕ್ಷ ಎಂ.ಆರ್.ಸೀತಾರಾಂ.   

ಬೆಂಗಳೂರು: ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪ‍ಕ ಅಧ್ಯಕ್ಷ ದಿವಂಗತ ಡಾ. ಎಂ.ಎಸ್‌. ರಾಮಯ್ಯ ಅವರ ಜನ್ಮ ಶತಮಾನೋತ್ಸವ ಮಾರ್ಚ್‌ 1ರಂದು ನಡೆಯಲಿದೆ.

ನ್ಯೂ ಬಿಇಎಲ್‌ ರಸ್ತೆಯ ಎಂ.ಎಸ್‌. ರಾಮಯ್ಯ ನಗರದ ಕಾಲೇಜಿನ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳಲಿದ್ದಾರೆ.

‘ಗುಣಮಟ್ಟದ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ನೀಡುವ ಉದ್ದೇಶದಿಂದ ಶೈಕ್ಷಣಿಕ ಸಂಸ್ಥೆಗಳನ್ನು ಎಂ.ಎಸ್‌. ರಾಮಯ್ಯ ಅವರು ಆರಂಭಿಸಿದ್ದರು. ರಾಜ್ಯದಲ್ಲಿ ಖಾಸಗಿ ಕಾಲೇಜುಗಳೇ ಇಲ್ಲದ ಸಂದರ್ಭದಲ್ಲಿ ಸರ್ಕಾರದ ನೆರವು ಪಡೆಯದೇ ಸ್ವಂತ ಜಮೀನಿನಲ್ಲಿ ಖಾಸಗಿ ಕಾಲೇಜುಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಎಂ.ಎಸ್.ರಾಮಯ್ಯ ಯಶಸ್ವಿಯಾದರು’ ಎಂದು ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಆರ್‌. ಜಯರಾಮ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

‘ದೂರದೃಷ್ಟಿಯ ನಾಯಕತ್ವ ಹೊಂದಿದ್ದ ಎಂ.ಎಸ್‌. ರಾಮಯ್ಯ ತಂತ್ರಜ್ಞಾನದ ಮಹತ್ವ ಅರಿತಿದ್ದರು. ಹೀಗಾಗಿಯೇ, ಅವರು 1962ರಲ್ಲಿಯೇ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಿದ್ದರು. ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್, ಕಾನೂನು ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳು ಇಂದು ಪ್ರತಿಷ್ಠಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಶಿಕ್ಷಣ ಸಂಸ್ಥೆಗಳ ಮೂಲಕ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಶಿಕ್ಷಣದಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಸಂಸ್ಥೆಯ ಕಾಲೇಜುಗಳಿಗೆ ನ್ಯಾಕ್, ಎನ್‌ಬಿಎ, ಎಂಸಿಐ ಸೇರಿದಂತೆ ಎಲ್ಲ ಮಾನ್ಯತಾ ಮಂಡಳಿಗಳಿಂದ ಮಾನ್ಯತೆ ಸಿಕ್ಕಿದೆ. ಇದು ಗುಣಮಟ್ಟವನ್ನು ಪ್ರತಿನಿಧಿಸುತ್ತದೆ’ ಎಂದರು.

‘ಜನ್ಮ ಶತಮಾನೋತ್ಸವದ ಪ್ರಯುಕ್ತ ಕಳೆದ ವರ್ಷದಿಂದಲೇ ಅಂತರಾಷ್ಟ್ರೀಯ ವಸ್ತುಪ್ರದರ್ಶನ, ಹ್ಯಾಕಥಾನ್ ಹಾಗೂ ರಾಮಯ್ಯ ಉಪಗ್ರಹ ಉಡಾವಣೆ ಸೇರಿದಂತೆ ಹಲವಾರು ಉಪನ್ಯಾಸ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗಿದೆ. ಉಪಗ್ರಹ ಉಡಾವಣೆ ಯೋಜನೆಯಲ್ಲಿ 100 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಇದು ಪ್ರಮುಖ ಕಾರ್ಯಕ್ರಮವಾಗಿದೆ’ ಎಂದು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ತಿಳಿಸಿದರು.

ಕುಲಪತಿ ಪ್ರೊ. ಕೆ.ಕೆ. ರೈನಾ ಮಾತನಾಡಿ, ’ಕೋವಿಡ್‌ ಸಮಯದಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆ ವತಿಯಿಂದ 10,973 ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಎರಡನೇ ಅಲೆಯಲ್ಲಿ 880 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.