ADVERTISEMENT

ಬೆಂಗಳೂರು | ಐಐಎಸ್‌ಸಿಯಲ್ಲಿ ಕಂಪ್ಯುಟೇಷನಲ್‌ ಆಂಕಾಲಜಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 15:39 IST
Last Updated 1 ನವೆಂಬರ್ 2023, 15:39 IST
ಭಾರತೀಯ ವಿಜ್ಞಾನ ಸಂಸ್ಥೆ 
ಭಾರತೀಯ ವಿಜ್ಞಾನ ಸಂಸ್ಥೆ    

ಬೆಂಗಳೂರು:ಸಂಕೀರ್ಣ ಸ್ವರೂಪದ ಕ್ಯಾನ್ಸರ್‌ಗಳ ಪೈಕಿ ಕೆಲ ಬಗೆಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಲಭ್ಯವಿದೆ. ಆದರೆ, ಈ ಚಿಕಿತ್ಸೆಗಳ ವೆಚ್ಚ ದುಬಾರಿ. ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆಯ ಲಭ್ಯತೆ ಇಂದಿನ ಅಗತ್ಯತೆ. ಇದಕ್ಕಾಗಿ ಜಗತ್ತಿನಾದ್ಯಂತ ವಿಜ್ಞಾನಿಗಳು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ‘ಕಂಪ್ಯುಟೇಷನಲ್ ಆಂಕಾಲಜಿ’ ತಂತ್ರಜ್ಞಾನ ಇಂತಹ ವಿಜ್ಞಾನಿಗಳ ಪಾಲಿಗೆ ‘ವರ’ವೆನಿಸಿದೆ.

ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸದ್ಯದಲ್ಲೇ ‘ಪರಮಹಂಸ ಫಿಲಾಂತ್ರಪಿ’ ಎಂಬ ಸಂಸ್ಥೆಯ ಸಹಯೋಗದಲ್ಲಿ ‘ಕಂಪ್ಯುಟೇಷನಲ್ ಆಂಕಾಲಜಿ’ ಕೇಂದ್ರವೊಂದು ಸ್ಥಾಪನೆಗೊಳ್ಳಲಿದ್ದು, ಗುರುವಾರ ಎರಡೂ ಸಂಸ್ಥೆಗಳ ಜತೆ ಒಪ್ಪಂದ ಆಗಲಿದೆ.

ಕಂಪ್ಯುಟೇಷನಲ್‌ ಆಂಕಾಲಜಿಯು ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಯೋಜನೆಯನ್ನು ಒಳಗೊಂಡ ಒಂದು ಶಿಸ್ತು. ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಆಧರಿಸಿ, ಗಣಿತ ಮತ್ತು ಲೆಕ್ಕಾಚಾರ (ಕಂಪ್ಯುಟೇಷನಲ್) ಮಾದರಿಗಳನ್ನು ಅನುಸರಿಸಿ ಕ್ಯಾನ್ಸರ್‌ ಗಡ್ಡೆ ಬೆಳೆಯುವ ಕ್ರಮ, ಗಡ್ಡೆಯ ಜೀವಶಾಸ್ತ್ರೀಯ ಬೆಳವಣಿಗೆಯನ್ನು ನಿಖರವಾಗಿ ಗುರುತಿಸಿ ಅದರ ಆಧಾರದಲ್ಲಿ ರೋಗಿಗೆ ಚಿಕಿತ್ಸೆಯನ್ನು ನಿರ್ಧರಿಸುವುದೇ ಈ ಸಂಶೋಧನಾ ಶಿಸ್ತಿನ ವಿಶೇಷತೆ.

ADVERTISEMENT

ಮಹತ್ವದ ಅಂಶವೆಂದರೆ ಕ್ಯಾನ್ಸರ್‌ ಕೋಶಗಳ ಲಭ್ಯ ಮಾಹಿತಿಯನ್ನು ಆಧರಿಸಿ ಕ್ಯಾನ್ಸರ್‌ನ ಮುಂದಿನ ಹಂತಗಳನ್ನು ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕೆ ತಕ್ಕಂತೆ ಚಿಕಿತ್ಸೆಯನ್ನೂ ಮಾರ್ಪಾಡು ಮಾಡಿಕೊಳ್ಳಬಹುದು. ಕ್ಯಾನ್ಸರ್‌ ಕುರಿತ ಸಂಶೋಧನೆಯಲ್ಲಿ ಮತ್ತಷ್ಟು ದಾರಿಗಳು ಮತ್ತು ವಿಧಾನಗಳನ್ನು ಕಂಡುಕೊಳ್ಳುವಲ್ಲಿ ಈ ತಂತ್ರಜ್ಞಾನವು ನೆರವಿಗೆ ಬರಲಿದೆ. ಭಾರತೀಯ ಪ್ರತಿಭೆಗಳ ಸಂಶೋಧನಾ ಸೃಜನಾತ್ಮಕತೆಗೆ ಈ ಕೇಂದ್ರ ಸೂಕ್ತ ವೇದಿಕೆ ಕಲ್ಪಿಸಲಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಧೀರಜ್‌ ಪಾಂಡೆ.

ಸ್ತನ, ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳಲ್ಲಿ ತೊಡಗಿಕೊಳ್ಳಲು ಬಯಸುವ ವಿಜ್ಞಾನಿಗಳು, ಸ್ನಾತಕೋತ್ತರ ಪದವೀಧರರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಅಗತ್ಯ ಶಿಕ್ಷಣ ಮತ್ತು ತರಬೇತಿ ನೆರವು ನೀಡಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ  ತಿಳಿಸಿದ್ದಾರೆ.

‘ನಮ್ಮ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಜೀವ ವಿಜ್ಞಾನ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದೆ. ಮಾನವ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿ ತೊಡಗಿದೆ. ಸಾರ್ವಜನಿಕ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ತರುವುದು ನಮ್ಮ ಆದ್ಯತೆ’ ಎಂದು ಪಾಂಡೆ ವಿವರಿಸಿದರು.

‘ಸಂಶೋಧನೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ಪಿಎಚ್‌ಡಿ ಮತ್ತು ಸಂಶೋಧನೋತ್ತರ ತರಬೇತಿಗೆ (ಪೋಸ್ಟ್‌ಡಾಕ್) ಗ್ರಾಜ್ಯುಯೇಟ್‌ ಫೆಲೋಶಿಪ್‌ ನೀಡುವ ಮೂಲಕ ಹೊಸ ತಲೆಮಾರಿನ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಬೆಳೆಸಲು ಉದ್ದೇಶಿಸಿದ್ದೇವೆ. ಕಂಪ್ಯುಟೇಷನಲ್‌ ಆಂಕಾಲಜಿಯಲ್ಲಿ ತೊಡಗಿಸಿಕೊಳ್ಳಬಯಸುವ ಇತರೆ ಪ್ರತಿಷ್ಠಿತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ಪ್ರತಿಭಾವಂತರಿಗೆ ಬೇಸಿಗೆ ಇಂಟರ್ನ್‌ಶಿಪ್‌ ಕಾರ್ಯಕ್ರಮ ಪರಿಚಯಿಸಲಾಗುತ್ತದೆ. ಅಲ್ಲದೇ, ಭಾರತದ ವಿವಿಧ ಭಾಗಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.