ಬೆಂಗಳೂರು:ಸೆಂಟ್ರಲ್ ಕಾಲೇಜಿನ ಸಸ್ಯವಿಜ್ಞಾನ ವಿಭಾಗದ ಶತಮಾನೋತ್ಸವ ಸಮಾರಂಭ ಗುರುವಾರ ನಡೆಯಿತು. ಇದೇ ಸಂದರ್ಭದಲ್ಲಿ ಜೀವ ವಿಜ್ಞಾನ ಸ್ನಾತಕೋತ್ತರ ವಿಭಾಗಗಳನ್ನು ಉದ್ಘಾಟಿಸಲಾಯಿತು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಬಯೋಕಾನ್ ಕಂಪನಿ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ, ‘ದೇಶ
ದಲ್ಲಿ ಅನೇಕ ಗಂಭೀರ ಸಮಸ್ಯೆಗಳು ಎದುರಾಗಿವೆ. ಅವುಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬಹುದು. ವಿಜ್ಞಾನ ಕ್ಷೇತ್ರವನ್ನು ಪ್ರತ್ಯೇಕವಾಗಿ ನೋಡದೆ, ಅದನ್ನು ಸಮಾಜದ ಭಾಗವಾಗಿಸಿಕೊಳ್ಳಬೇಕು’ ಎಂದರು.
‘ದೇಶದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಆಗಿದೆ. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ’ ಎಂದರು.
‘ಶಿಕ್ಷಣ ಮತ್ತು ಜ್ಞಾನಕ್ಕೆ ವ್ಯತ್ಯಾಸವಿದೆ. ಆದರೆ, ಶಿಕ್ಷಣವಿಲ್ಲದೆ ಜ್ಞಾನ ಬರುವುದಿಲ್ಲ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಬೇಕಾದ ಪೂರಕ ವಾತಾವರಣ, ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ ಎಂದರು.
‘ವಿಜ್ಞಾನ ಕಲಿಕೆಯಲ್ಲಿ ಉತ್ಸಾಹ ಮತ್ತು ಕುತೂಹಲ ಮುಖ್ಯ. ಈ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ನಡೆಸಿ ಹೊಸ ಹೊಸ ವಿಚಾರಗಳನ್ನು, ಆವಿಷ್ಕಾರಗಳನ್ನು ಸಮಾಜದ ಒಳಿತಿಗೆ ನೀಡಬೇಕು’ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ. ರಾಘವೇಂದ್ರ ಗದಗಕರ್, ‘ವಿದ್ಯಾರ್ಥಿಗಳು ಓದಿನ ವಿಚಾರದಲ್ಲಿ ಚೌಕಟ್ಟು ಹಾಕಿಕೊಳ್ಳಬಾರದು. ಉಪನ್ಯಾಸಕರ ಬೋಧನೆಯನ್ನು ನೆಚ್ಚಿಕೊಳ್ಳದೆ ಸ್ವತಃ ಅಧ್ಯಯನಕ್ಕೆ ಮುಂದಾಗಬೇಕು’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.