ಬೆಂಗಳೂರು: ‘ಸ್ವಾಮೀನಾಥನ್ ವರದಿ ಜಾರಿಗೊಳಿಸುವ ಬಗ್ಗೆ ಕೇಂದ್ರ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಿದ್ದರೂ ಅದನ್ನು ಪ್ರಶ್ನಿಸುವ ಧೈರ್ಯವನ್ನು ಯಾರೂ ಮಾಡುತ್ತಿಲ್ಲ ’ ಎಂದು ಪತ್ರಕರ್ತ ಪಿ.ಸಾಯಿನಾಥ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೃಷಿಕರ ಈ ಬಿಕ್ಕಟ್ಟಿನ ಬಗ್ಗೆ ಕೇಳಿಸಿಕೊಳ್ಳದಿರುವುದಕ್ಕೆ ಸರ್ಕಾರ ಪ್ರಯತ್ನ ಪಡುತ್ತಿದೆ. ಮಾಧ್ಯಮವೂ ರೈತರ ಸಂಕಷ್ಟವನ್ನು ಮೇಲ್ಪದರದಲ್ಲಿಯೇ ವಿಶ್ಲೇಷಿಸಿ, ಒಟ್ಟಾರೆ ಕೃಷಿ ಬಿಕ್ಕಟ್ಟನ್ನು ಕೇವಲ ಸಾಲಮನ್ನಾ ವಿಷಯಕ್ಕೆ ಇಳಿಸಿಬಿಟ್ಟಿವೆ. ಬೆಳೆ ಬೆಳೆಯುವುದಕ್ಕೆ ಆಗುವ ವೆಚ್ಚ ಮತ್ತು ಅದರ ಅರ್ಧದಷ್ಟು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಬೇಡಿಕೆಯನ್ನು ಈಗಾಗಲೇ ಅನುಷ್ಠಾನ ಗೊಳಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಪ್ರತ್ಯತ್ತರ ನೀಡಿದೆ’ ಎಂದು ವಿವರಿಸಿದರು.
‘2014ರಲ್ಲಿ ಎನ್‌ಡಿಎ ತನ್ನ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ಆಯೋಗ ಹೇಳುವ ಪ್ರಮುಖ ಶಿಫಾರಸನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿತ್ತು. ಅದಾದ ನಂತರ ಕೃಷಿ ಸಚಿವರಾಗಿದ್ದ ರಾಧಮೋಹನ್ ಸಿಂಗ್ ನಮ್ಮ ಸರ್ಕಾರ ಆ ರೀತಿಯ ಆಶ್ವಾಸನೆಯನ್ನು ನೀಡಿಯೇ ಇಲ್ಲ ಎಂದು ಪ್ರತಿಪಾದಿಸಿದರು. ನಂತರ 2017ರ ಜನವರಿಯಲ್ಲಿ ಎನ್‌ಡಿಎ ಮಂಡಿಸಿದ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿದ್ದೇವೆ ಎಂದು ಹೇಳಿದೆ. ಅದೇ ಸರ್ಕಾರ 2018ರ ಜೂನ್‌ನಲ್ಲಿ ಸ್ವಾಮಿನಾಥನ್ ಶಿಫಾರಸುಗಳನ್ನು ಈಡೇರಿಸಲು ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ( ಎಂಎಸ್‌ಪಿ) ಹೆಚ್ಚಿಸುತ್ತೇವೆ ಎಂದು ಘೋಷಿಸಿದರು. ಹೀಗೆ ಸರಣಿ ಸುಳ್ಳುಗಳನ್ನು ಪೋಣಿಸಿ ರೈತರ ಕೊರಳಿಗೆ ಹಾಕಿದ್ದಾರೆ’ ಎಂದು ಹೇಳಿದರು.
ದೆಹಲಿ ಚಲೋ: ಕೃಷಿಕರ, ಕೂಲಿಕಾರ್ಮಿಕರ, ಚಿಲ್ಲರೆ ವ್ಯಾಪಾರಿಗಳ ಬಿಕ್ಕಟ್ಟು ಪರಿಹಾರಕ್ಕಾಗಿ ವಿಶೇಷ ಅಧಿವೇಶನ ನಡೆಸಿ, ನಮ್ಮ ಸಂಕಷ್ಟಗಳ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿ, ಸುಮಾರು 200 ರೈತ ಸಂಘಟನೆಗಳು ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮೂಲಕ ಇದೇ ನವೆಂಬರ್ 30ರಂದು ‘ದೆಹಲಿ ಚಲೋ’ ನಡೆಸಲು ಯೋಜಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಮ ವರ್ಗದವರು ಮತ್ತು ವೃತ್ತಿಪರರು ಈ ಚಳವಳಿಗೆ ಕೈಜೋಡಿಸಬೇಕು. ದೇಶದ ಎಲ್ಲಾ ಭಾಗದ ಜನರೂ ಇದರಲ್ಲಿ ಪಾಲ್ಗೊಳ್ಳಬಹುದು. ವಿವಿಧೆಡೆಯಿಂದ ಬಂದು ದೆಹಲಿಯಲ್ಲಿ ಸೇರಿ, ಸಂಸತ್ತಿನವರೆಗೆ ಕಾಲ್ನಡಿಗೆ ಮಾಡಲಾಗುವುದು. ಇದರ ಮಾಹಿತಿಗಾಗಿ ಬ್ಲಾಗ್‌ವೊಂದನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
‘ಮೂರು ವಾರಗಳ ವಿಶೇಷ ಅಧಿವೇಶನ ನಡೆಸಿ, ಅದರಲ್ಲಿ ಸ್ವಾಮಿನಾಥನ್ ಅವರ ವರದಿಯ ಬಗ್ಗೆ ಸಮಗ್ರವಾಗಿ ಚರ್ಚಿಸಬೇಕು. ಯಾವುದೇ ತಜ್ಞರೂ ಜನ ಅನುಭವಿಸುತ್ತಿರುವ ಸಂಕಷ್ಟವನ್ನು ವಿವರಿಸಲು ಸಾಧ್ಯವಿಲ್ಲ. ಹೀಗಾಗಿ ರೈತರ, ಕೂಲಿಕಾರ್ಮಿಕರ ಸಂಕಷ್ಟಗಳನ್ನು ಅವರೇ ಹೇಳಿಕೊಳ್ಳಲು ಅವಕಾಶ ನೀಡಬೇಕು. ನೀರಿನ ಬಿಕ್ಕಟ್ಟು, ಮಹಿಳಾ ರೈತರ ಸಮಸ್ಯೆಗಳು, ಭೂ–ಒಡೆತನದ ಬಗ್ಗೆ ಚರ್ಚಿಸಬೇಕು’ ಎಂದು ಒತ್ತಾಯಿಸಿದರು.
‘ರೈತರ ಆತ್ಮಹತ್ಯೆಗೆ ಕಾರಣಗಳಿವು’
‘ಬಿತ್ತನೆ ಬೀಜ, ರಸಗೊಬ್ಬರ, ಔಷಧಿ.. ಹೀಗೆ ರೈತರ ನಿಯಂತ್ರಣದಲ್ಲಿದ್ದ ಕೃಷಿಗೆ ಅಗತ್ಯವಾದ ಸರಕುಗಳು ಕಾರ್ಪೊರೇಟ್ ಕಂಪನಿಗಳ ಕೈಗೆ ವರ್ಗಾವಣೆಯಾದವು. 1996ರಿಂದ ಈ ಸ್ಥಿತ್ಯಂತರ ಪ್ರಾರಂಭವಾಯಿತು. ಕೃಷಿ ಮಾಡುವುದು ಹೊರತುಪಡಿಸಿ ರೈತನ ಕೈಯಲ್ಲಿ ಏನೂ ಇಲ್ಲ. ಇದೇ ಕಾರಣದಿಂದಲೇ ರೈತರ ಆತ್ಮಹತ್ಯೆಗಳು ಸಂಭವಿಸುತ್ತಿವೆ’ ಎಂದು ವಿಶ್ಲೇಷಿಸಿದರು.
‘20 ವರ್ಷಗಳಲ್ಲಿ ದೇಶದಾದ್ಯಂತ ಬರೊಬ್ಬರಿ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜಕ್ಕೂ ದುಬಾರಿ ಹಣ ತೆರಬೇಕು. ಹೀಗೆ ಒಂದು ಬೆಳೆ ಬೆಳೆಯುವುದಕ್ಕೆ ಮಾಡುವ ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.