ಬೆಂಗಳೂರು: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ನಿರ್ಮಿಸಲಾಗುತ್ತಿದ್ದ ಪಾರ್ಕಿಂಗ್ ಕಟ್ಟಡದ ಸೆಂಟ್ರಿಂಗ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, 12 ಜನರು ಗಾಯಗೊಂಡಿದ್ದಾರೆ.
ವರ್ತಕರ ಹಾಗೂ ಗ್ರಾಹಕರ ವಾಹನಗಳ ನಿಲುಗಡೆಗಾಗಿ ಎಪಿಎಂಸಿಯು ₹ 77 ಕೋಟಿ ವೆಚ್ಚದಲ್ಲಿ 11 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿತ್ತು. ಅದರ ಗುತ್ತಿಗೆಯನ್ನು ‘ಸ್ಟಾರ್ ಕನ್‌ಸ್ಟ್ರಕ್ಷನ್’ಗೆ ನೀಡಲಾಗಿದ್ದು, ಏಳು ತಿಂಗಳಲ್ಲಿ ಎರಡು ಅಂತಸ್ತುಗಳ ನಿರ್ಮಾಣ ಪೂರ್ಣಗೊಂಡಿತ್ತು. ಶುಕ್ರವಾರ ನಸುಕಿನ ವೇಳೆ (4.30) ಸುಮಾರು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಈ ವೇಳೆ 3ನೇ ಮಹಡಿಯ ಒಂದು ಮೂಲೆಯಲ್ಲಿ ಸೆಂಟ್ರಿಂಗ್ ಕುಸಿದಿದ್ದು, ಅವಶೇಷಗಳ ಜತೆ ಕಾರ್ಮಿಕರೂ ಕೆಳಗೆ ಬಿದ್ದರು. ಅಲ್ಲದೇ, 2ನೇ ಮಹಡಿಯಲ್ಲಿದ್ದ ಆರು ಕಾರ್ಮಿಕರೂ ಅವಶೇಷಗಳಡಿ ಸಿಲುಕಿದರು. ಆಗಷ್ಟೇ ಈರುಳ್ಳಿ ಹಾಗೂ ಆಲೂಗಡ್ಡೆ ಮೂಟೆಗಳನ್ನು ಮಾರುಕಟ್ಟೆಗೆ ತಂದಿದ್ದ ಕೆಲ ರೈತರು, ಕೂಡಲೇ ಅವರ ರಕ್ಷಣೆಗೆ ಮುಂದಾದರು. ಸ್ವಲ್ಪ ಸಮಯದಲ್ಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳಕ್ಕೆ ದೌಡಾಯಿಸಿದರು.
ಅರ್ಧ ತಾಸಿನಲ್ಲೇ ಅಷ್ಟೂ ಕಾರ್ಮಿಕರನ್ನು ಅವಶೇಷಗಳಿಂದ ಹೊರಗೆ ತಂದ ರಕ್ಷಣಾ ಪಡೆ ಸಿಬ್ಬಂದಿ, ಗಾಯಾಳುಗಳನ್ನು ಕೆ.ಸಿ.ಜನರಲ್ ಹಾಗೂ ಕಣ್ವ ಶ್ರೀ ಸಾಯಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಬಿಹಾರದ ರಾಕೇಶ್ (21) ಹಾಗೂ ಪಶ್ಚಿಮ ಬಂಗಾಳದ ರಾಹುಲ್ ಗೋಸ್ವಾಮಿ (19) ಎಂಬ ಕಾರ್ಮಿಕರು ಸ್ವಲ್ಪ ಸಮಯದಲ್ಲೇ ಕೊನೆಯುಸಿರೆಳೆದರು. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ದಟ್ಟಣೆ ಆಗುತ್ತಿತ್ತು: ‘ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದರಿಂದ ಆವರಣದಲ್ಲಿ ದಟ್ಟಣೆ ಉಂಟಾಗುತ್ತಿತ್ತು. ವರ್ತಕರಿಗೆ ಅನುಕೂಲ ಮಾಡಲೆಂದೇ 700–800 ವಾಹನಗಳ ನಿಲುಗಡೆ ಸಾಮರ್ಥ್ಯದ ಕಟ್ಟಡ ನಿರ್ಮಿಸಲು ಹೊರಟಿದ್ದೆವು. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಕಂಪನಿಗೆ ಎರಡು ವರ್ಷಗಳ ಗಡುವು ನಿಗದಿ ಮಾಡಲಾಗಿತ್ತು. ಕಾಮಗಾರಿ ಬಗ್ಗೆ ಸೈಟ್ ಎಂಜಿನಿಯರ್‌ಗಳಿಂದ ವಿವರಣೆ ಕೇಳಿದ್ದೇನೆ’ ಎಂದು ಎಪಿಎಂಸಿ ಕಾರ್ಯದರ್ಶಿ ಅನಿಲ ಕುಮಾರಿ ಹೇಳಿದರು.
ಗಾಯಾಳುಗಳು
ಬಿಹಾರದ ಓಂಪ್ರಕಾಶ್ (21), ಪಶ್ಚಿಮ ಬಂಗಾಳದ ಗಿರಿಜ್ (35), ಅಬ್ದುಲ್ ಹಮೀದ್ ಶೇಖ್ (40), ಛೋಟು ಬುಯ್ಯ (24), ನಿಯಾಜುಲ್ ಶೇಖ್ (30), ಶ್ಯಾಮ್ ಗೋಸ್ವಾಮಿ (40), ನಾಸಿರ್ ಶೇಖ್ (35), ಯಾದಗಿರಿಯ ದೇವರಾಜು (21), ಹನುಮಂತ (22), ಮಲ್ಲಿಕಾರ್ಜುನ (20), ದೊಡ್ಡಪ್ಪ (22), ಸಿದ್ದಪ್ಪ (22).
‘ಸೆಂಟ್ರಿಂಗ್‌ನಲ್ಲೇ ಸಮಸ್ಯೆ’
‘ಮಾರುಕಟ್ಟೆಯಲ್ಲಿ ಬೆಳಿಗ್ಗೆ ವಹಿವಾಟು ಹೆಚ್ಚಿರುವ ಕಾರಣ ರಾತ್ರಿ ವೇಳೆ ಕಾಮಗಾರಿ ನಡೆಸಲಾಗುತ್ತಿತ್ತು. ತೆಳುವಾದ ಸರಳುಗಳನ್ನು ಬಳಸಿ ಸೆಂಟ್ರಿಂಗ್ ಹಾಕಿದ್ದರಿಂದ, ಮಹಡಿಯಲ್ಲಿ ಭಾರ ಹೆಚ್ಚಾದಾಗ ಆ ಸರಳುಗಳು ಬಾಗಿ ಅಂತಸ್ತು ಕುಸಿದಿದೆ. ನಿರ್ಲಕ್ಷ್ಯ ಆರೋಪದಡಿ (304ಎ) ಪ್ರಕರಣ ದಾಖಲಿಸಿಕೊಂಡು, ಸೈಟ್ ಎಂಜಿನಿಯರ್ ಉಮಾಶಂಕರ್ ಹಾಗೂ ಬಿಲ್ಡರ್ ಚಂದ್ರು ಅವರನ್ನು ಬಂಧಿಸಿದ್ದೇವೆ’ ಎಂದು ಆರ್‌ಎಂಸಿ ಯಾರ್ಡ್ ಪೊಲೀಸರು ತಿಳಿಸಿದರು.
‘ದುರಂತದ ವಿಷಯ ತಿಳಿಸುವ ಧೈರ್ಯವಿಲ್ಲ’
‘ಕೂಲಿ ಅರಸಿ ಒಂದೇ ಊರಿನ 30 ಸ್ನೇಹಿತರು ವರ್ಷದ ಹಿಂದೆ ನಗರಕ್ಕೆ ಬಂದಿದ್ದೆವು. ಈಗ ದುರಂತದಲ್ಲಿ ಒಬ್ಬಾತನನ್ನು ಕಳೆದುಕೊಂಡಿದ್ದೇವೆ. ಆರು ಮಂದಿ ಹಾಸಿಗೆ ಹಿಡಿದಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ದುರಂತದ ವಿಷಯ ತಿಳಿಸುವ ಧೈರ್ಯ ನಮಗಿಲ್ಲ. ಹೀಗಾಗಿ, ನಾವೇ ಆರೈಕೆ ಮಾಡುತ್ತಿದ್ದೇವೆ...’
ನಂದಿನಿ ಲೇಔಟ್‌ನ ‘ಕಣ್ವ ಶ್ರೀ ಸಾಯಿ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರ ಸ್ನೇಹಿತ ವಜೀರ್ ಅವರು ಹೇಳಿದ ಮಾತಿದು.
‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಮ್ಮ ಪೋಷಕರು, ಸಂಬಂಧಿಕರೆಲ್ಲ ಊರಿನಲ್ಲಿದ್ದಾರೆ. ಸಂಬಳ ಬರುತ್ತಿದ್ದಂತೆ ಮನೆಗೆ ಹಣ ಕಳುಹಿಸುತ್ತೇವೆ. ನಾವು ಇಲ್ಲಿ ಯಾವ ಕೆಲಸ ಮಾಡುತ್ತಿದ್ದೇವೆ ಎಂಬುದೂ ಅವರಿಗೆ ಗೊತ್ತಿಲ್ಲ. ದುರಂತದ ವಿಚಾರ ಗೊತ್ತಾದರೆ, ಭಯ ಬಿದ್ದು ರಾತ್ರೋರಾತ್ರಿ ಹೊರಟು ಬಂದು ಬಿಡುತ್ತಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಅವರಿಗೆ ವಿಷಯ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದರು.
‘ನಮ್ಮ ಸ್ನೇಹಿತರಿಗೆ ಪ್ರಾಣ ಹೋಗುವಂತಹ ದೊಡ್ಡ ಗಾಯಗಳೇನೂ ಆಗಿಲ್ಲ. ಆದರೂ, ಅವರು ಮೊದಲಿನಂತೆ ಆಗಲು ಕನಿಷ್ಠ 15 ದಿನಗಳಾದರೂ ಬೇಕು. ಪೋಷಕರನ್ನು ನೋಡಬೇಕು, ಅವರೊಂದಿಗೆ ಮಾತನಾಡಬೇಕೆಂದು ಗಾಯಾಳು ಸ್ನೇಹಿತರು ಬಯಸುತ್ತಿದ್ದಾರೆ. ಪೂರ್ತಿ ಚೇತರಿಸಿಕೊಂಡ ನಂತರ ನಾವೇ ಅವರನ್ನು ಊರಿಗೆ ಕರೆದು ಕೊಂಡು ಹೋಗಿ ಬರುತ್ತೇವೆ’ ಎಂದೂ ಹೇಳಿದರು.
‘30 ಕಾರ್ಮಿಕರೂ ಬೇರೆ ಬೇರೆ ಕಡೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗು ತ್ತಿದ್ದೆವು. ರಾತ್ರಿ 12 ಗಂಟೆ ನಂತರ ನಮ್ಮ ಕೆಲಸ ಶುರುವಾಗುತ್ತಿತ್ತು. ಸದ್ಯ ದುರಂತ ಸಂಭವಿಸಿರುವ ಸ್ಥಳದ ಸಮೀಪದಲ್ಲೇ ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತಿದ್ದು, ಅಲ್ಲಿ ನಾನು ಹಾಗೂ ಐವರು ಸ್ನೇಹಿತರು ಗುರುವಾರ ತಡರಾತ್ರಿಯಿಂದ ಕೆಲಸ ಮಾಡುತ್ತಿದ್ದೆವು. ಸೆಂಟ್ರಿಂಗ್ ಕುಸಿದಿದ್ದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಹೋಗಿ ಸ್ನೇಹಿತರನ್ನು ರಕ್ಷಿಸಿ ಆಸ್ಪತ್ರೆಗೆ ಕರೆ ತಂದೆವು’ ಎಂದರು.
‘ಈ ಬಾರಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಆಗುವುದಿಲ್ಲ ಎಂದು ಗೆಳೆಯ ಸಿದ್ದಪ್ಪನ ಬಳಿ ಹೇಳಿದ್ದೆ. ಅದಕ್ಕೆ ಆತ, ‘ನನಗೂ ಆ ದಿನ ರಜೆ ಇರುತ್ತದೆ. ನಮ್ಮ ಮನೆಗೇ ಬಂದು ಬಿಡು. ಹಬ್ಬದ ಅಡುಗೆ ಮಾಡಿ ಊಟ ಮಾಡೋಣ’ ಎಂದಿದ್ದ. ಆದರೀಗ ಆತ ಹಾಸಿಗೆ ಹಿಡಿದು ಮಲಗಿದ್ದಾನೆ’ ಎಂದು ಯಾದಗಿರಿಯ ರಾಮಪ್ಪ ದುಃಖತಪ್ತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.