ADVERTISEMENT

ಜಿಮ್‌ ಗ್ರಾಹಕರಿಗೆ ಸ್ಟಿರಾಯ್ಡ್| ‘ಅಲ್ಟಿಮೇಟ್ ಫಿಟ್ನೆಸ್’ ಮೇಲೆ ದಾಳಿ:ಮಾಲೀಕ ಬಂಧನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 20:01 IST
Last Updated 24 ಆಗಸ್ಟ್ 2019, 20:01 IST
ಶಶಿಕುಮಾರ್
ಶಶಿಕುಮಾರ್   

ಬೆಂಗಳೂರು: ‘ವ್ಯಾಯಾಮ ಮಾಡಲು ಜಿಮ್‌ಗೆ ಬರುತ್ತಿದ್ದ ಗ್ರಾಹಕರಿಗೆ ಸ್ಟಿರಾಯ್ಡ್ ನೀಡಲಾಗುತ್ತಿದೆ’ ಎಂಬ ಮಾಹಿತಿ ಮೇರೆಗೆ ಚಾಮರಾಜಪೇಟೆಯ ‘ಅಲ್ಟಿಮೇಟ್ ಫಿಟ್ನೆಸ್’ ಜಿಮ್ ಮೇಲೆ ದಾಳಿ ಮಾಡಿದ್ದ ಪೊಲೀಸರು, ಜಿಮ್ ಮಾಲೀಕ ಶಶಿಕುಮಾರ್ (29) ಎಂಬಾತನನ್ನು ಬಂಧಿಸಿದ್ದಾರೆ.

‘ಸ್ವತಃ ಬಾಡಿ ಬಿಲ್ಡರ್ ಆಗಿರುವ ಹೊಸಕೆರೆಹಳ್ಳಿ ನಿವಾಸಿ ಶಶಿಕುಮಾರ್, 4ನೇ ಮುಖ್ಯರಸ್ತೆಯಲ್ಲಿ ಕೆಲ ವರ್ಷಗಳ ಹಿಂದಷ್ಟೇ ಜಿಮ್ ತೆರೆದಿದ್ದರು. ಜಿಮ್‌ನಲ್ಲಿ ನಿತ್ಯ 100ಕ್ಕೂ ಹೆಚ್ಚು ಗ್ರಾಹಕರು ತರಬೇತಿ ಪಡೆಯುತ್ತಿದ್ದರು’ ಎಂದು ಚಾಮರಾಜಪೇಟೆ ಪೊಲೀಸರು ತಿಳಿಸಿದರು.

‘ಬೇಗನೇ ದಪ್ಪ ಆಗಬೇಕು ಅಥವಾ ತೆಳ್ಳಗಾಗಬೇಕು ಎಂದುಕೊಂಡೇ ಕೆಲವರು ಜಿಮ್‌ಗೆ ಬರುತ್ತಿದ್ದರು. ವೈದ್ಯರ ಸಲಹೆ ಪಡೆಯದೇ ಗ್ರಾಹಕರಿಗೆ ಸ್ಟಿರಾಯ್ಡ್ ಔಷಧಿ ನೀಡಲಾಗುತ್ತಿತ್ತು. ಆ ಬಗ್ಗೆ ಸಾರ್ವಜನಿಕರೊಬ್ಬರು ನೀಡಿದ್ದ ದೂರಿನ ಮೇಲೆ ಇದೇ 21ರಂದು ಜಿಮ್‌ ಮೇಲೆ ದಾಳಿ ಮಾಡಲಾಗಿತ್ತು’ ಎಂದರು. ‘ದಾಳಿ ವೇಳೆ ಸ್ಟಿರಾಯ್ಡ್‌, ದೇಹ ಹುರಿಗೊಳಿಸುವ ಮಾತ್ರೆಗಳು, ಇಂಜಕ್ಷನ್‌ಗಳೂ ಸಿಕ್ಕಿದ್ದವು. ಅವೆಲ್ಲವನ್ನೂ ಜಪ್ತಿ ಮಾಡಿಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದರು.

ADVERTISEMENT

ಆನ್‌ಲೈನ್‌ನಲ್ಲಿ ಖರೀದಿ: ‘ಸ್ಟಿರಾಯ್ಡ್ ಬಳಕೆಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಗೊತ್ತಿದ್ದರೂ ಆರೋಪಿ, ಗ್ರಾಹಕರಿಗೆ ಸ್ಟಿರಾಯ್ಡ್‌ ನೀಡಿ ಅದನ್ನು ನಿತ್ಯವೂ ಸೇವಿಸುವಂತೆ ಸಲಹೆ ನೀಡುತ್ತಿದ್ದ’ ಎಂದು ಪೊಲೀಸರು ವಿವರಿಸಿದರು.

‘ಆನ್‌ಲೈನ್‌ ಜಾಲತಾಣಗಳಿಂದ ಆರೋಪಿ, ಸ್ಟಿರಾಯ್ಡ್‌ ತರಿಸಿಟ್ಟುಕೊಳ್ಳುತ್ತಿದ್ದ’ ಎಂದು ಪೊಲೀಸರು ನುಡಿದರು.

ಅಡ್ಡ ಪರಿಣಾಮ ಇಲ್ಲ ಎಂದು ಹೇಳಿದ್ದ...

‘ಯಾವುದೇ ಅಡ್ಡ ಪರಿಣಾಮ ಇಲ್ಲವೆಂದು ಹೇಳಿಯೇ ಆರೋಪಿ, ಗ್ರಾಹಕರಿಗೆ ಸ್ಟಿರಾಯ್ಡ್ ನೀಡುತ್ತಿದ್ದ ಎಂದು ಆತನ ಮಾತು ನಂಬಿ ಔಷಧಿ ಸೇವಿಸುತ್ತಿದ್ದ ಬಗ್ಗೆ ಗ್ರಾಹಕರೊಬ್ಬರು ಹೇಳಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ನಂಬಿಕೆ ದ್ರೋಹ (ಐಪಿಸಿ 406), ವಂಚನೆ (ಐಪಿಸಿ 420) ಆರೋಪದಡಿ ಶಶಿಕುಮಾರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಔಷಧಿಯಿಂದ ಅನಾರೋಗ್ಯಕ್ಕೆ ತುತ್ತಾದ ಗ್ರಾಹಕರ ಹೇಳಿಕೆಗಳನ್ನೂ ಪಡೆಯಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.