ADVERTISEMENT

‘ಕಲ್ಮಶ ಮನಸ್ಸಿನಿಂದ ನಾಟಕ ವೀಕ್ಷಣೆ’: ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರರ ಮೂರು ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಮೇ 2023, 21:08 IST
Last Updated 14 ಮೇ 2023, 21:08 IST
ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ   

ಬೆಂಗಳೂರು: ‘‌ನಾಟಕವನ್ನು ನಾಟಕವಾಗಿಯೇ ನೋಡದೇ, ರಾಜಕೀಯ ಹಾಗೂ ಜಾತಿಯ ನೆಲೆಗಟ್ಟಿನಲ್ಲಿ ವೀಕ್ಷಿಸಲಾಗುತ್ತಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು. 

ಅಂಕಿತ ಪ್ರಕಾಶನ ನಗರದಲ್ಲಿ ಭಾನುವಾರ ಆನ್‌ಲೈನ್ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ‘ಸಾವಿರದ ಶರಣವ್ವ ಕನ್ನಡದ ತಾಯೇ’, ‘ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು’ ಹಾಗೂ ‘ಅಮೋಘವರ್ಷ ನೃಪತುಂಗ ಮತ್ತು ಇತರ ನಾಟಕಗಳು’ ಕೃತಿ ಬಿಡುಗಡೆಯಾಯಿತು. 

‘ಕತೆ ಇರುವುದೇ ಮಕ್ಕಳಿಗೋಸ್ಕರ. ದೊಡ್ಡವರಿಗೆ ಕತೆಗಳ ಮೇಲೆ ಆಸಕ್ತಿ ಇರುವುದಿಲ್ಲ. ದೊಡ್ಡವರ ಆಸಕ್ತಿಯ ಹಿಂದೆ ಸ್ವಾರ್ಥದ ಆಲೋಚನೆ ಇರುತ್ತದೆ’ ಎಂದು ಚಂದ್ರಶೇಖರ ಕಂಬಾರ ತಿಳಿಸಿದರು.

ADVERTISEMENT

ವಿಮರ್ಶಕ ಬಸವರಾಜ ಕಲ್ಗುಡಿ, ‘ನಮ್ಮ ಸಾಹಿತ್ಯದ ಶೈಲಿಯನ್ನು ಬಳಸಿಕೊಂಡು, ಆಧುನಿಕತೆಯ ಸಂದಿಗ್ಧತೆಯೊಂದಿಗೆ ಮುಖಾಮುಖಿಯಾಗಿಸುವ ಪರಿ ದೊಡ್ದದು. ಕಂಬಾರರು ಆಧುನಿಕ ಭಾರತದ ಬರಹ ಪ್ರಪಂಚದ ಪರಂಪರೆಯಲ್ಲಿ ಒಂದು ಭಿನ್ನವಾದ ಮಾರ್ಗವನ್ನು ತುಳಿದಿದ್ದಾರೆ’ ಎಂದು ಹೇಳಿದರು.

ಕೃತಿಗಳ ಬಗ್ಗೆ ಮಾತನಾಡಿದ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ‘ಕಂಬಾರರ ನಾಟಕ ಸಾಹಿತ್ಯದಲ್ಲಿ ಭಾಷೆಯೇ ಭಿನ್ನ. ಅದರದ್ದೇ ಆದ ಪದಗತಿಯಲ್ಲಿ ವಿಶೇಷವೆನ್ನಿಸುತ್ತದೆ. ಭಾಷೆ ಕಸುವನ್ನು ಇನ್ನೊಂದು ಭಾಷೆಯ ಜೊತೆಗೆ ಸಮೀಕರಿಸುವ ಕೆಲಸ ಮಾಡಲಾಗಿದೆ. ಬದುಕಿನ ಬಗ್ಗೆ ಭರವಸೆ ಮೂಡಿಸುವ, ನಾಳೆಗಳಿವೆ ಎಂದು ತಿಳಿಸುವ ನಾಟಕ ಕೃತಿಗಳಿವು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾದಂಬರಿಕಾರ ಗಜಾನನ ಶರ್ಮ, ‘ಬಾಲ್ಯದ ತುಂಟತನ ಇರುವವರಷ್ಟೇ ಮಕ್ಕಳ ನಾಟಕ ಬರೆಯಬಹುದು. ಮಕ್ಕಳು ಸರ್ವತೋಮುಖವಾಗಿ ಬೆಳವಣಿಗೆಗೆ ನಾಟಕ ಸೇರಿದಂತೆ ಸಾಹಿತ್ಯದ ಅಗತ್ಯತೆ ಹೆಚ್ಚಿದೆ‘ ಎಂದರು.

ಲೇಖಕ ಮತ್ತು ರಂಗ ಚಿಂತಕ ನಾರಾಯಣ ರಾಯಚೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.