ಬೆಂಗಳೂರು: ‘ದೇಶದಲ್ಲಿ ಜಾತಿ, ಹಣ, ತಂತ್ರಗಾರಿಕೆಗಳಿಂದ ಚುನಾವಣೆಗಳಲ್ಲಿ ಗೆಲುವು ಸಾಧಿಸಲಾಗುತ್ತಿದೆ. ಆದ್ದರಿಂದ ನಮ್ಮನ್ನು ಆಳುವ ನಾಯಕರು ಪರಿಕಲ್ಪನೆಯ ಹರಿಕಾರರಲ್ಲ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ತಿಳಿಸಿದರು.
ಸಾಹಿತಿ ಚಂದ್ರಶೇಖರ ಕಂಬಾರ ಅವರ 87ನೇ ಜನ್ಮದಿನದ ಪ್ರಯುಕ್ತ ಕಮಲಾಪುರದ ಮಯ ಪ್ರಕಾಶನ, ಸಿರಿನಾಡು ವೆಬ್ ಟಿವಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಸಾವಿರದ ಶರಣವ್ವ ಕನ್ನಡದ ತಾಯೆ’ ಸರಣಿ ವಿಚಾರಸಂಕಿರಣದಲ್ಲಿ ಭಾಗವಹಿಸಿ, ಮಾತನಾಡಿದರು. ‘ಪರಿಕಲ್ಪನೆಯ ನಿಜವಾದ ಹರಿಕಾರರು ಬುದ್ಧಿಜೀವಿಗಳು. ಆದ್ದರಿಂದ ಅವರಿಗೆ ನಾಗರಿಕ ಸಮಾಜದಲ್ಲಿ ಜನಮನ್ನಣೆ ದೊರೆಯಬೇಕು. ಯಾವ ದೇಶದಲ್ಲಿ ಬುದ್ಧಿಜೀವಿಗಳಿಗೆ ಗೌರವ ದೊರೆಯುವುದೋ ಅಲ್ಲಿ ಅತ್ಯುನ್ನತ ನಾಗರಿಕತೆ ಇರಲಿದೆ’ ಎಂದು ಹೇಳಿದರು.
‘ಬುದ್ಧಿಜೀವಿಗಳು ಆಳುವ ವರ್ಗಕ್ಕೆ ಚಾಟಿ ಬೀಸಿ, ಜನಪರ ಕಾರ್ಯಗಳಲ್ಲಿ ಜನನಾಯಕರು ತೊಡಗಿಕೊಳ್ಳುವಂತೆ ಮಾಡಬೇಕು. ಸಮಾಜದ ಮೇಲೆ ಲೇಖಕನಿಗೆ ಇರುವಷ್ಟು ಹಿಡಿತ ಬೇರೆ ಯಾವುದೇ ನಾಯಕನಿಗೂ ಇರುವುದಿಲ್ಲ. ಇದಕ್ಕೆ ಕಾರ್ಲ್ ಮಾರ್ಕ್ಸ್ ಉತ್ತಮ ಉದಾಹರಣೆ. ಸಿನಿಮಾಗಳು ಕೂಡ ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರಲಿವೆ. ಆದರೆ, ಇತ್ತೀಚೆಗೆ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಹಿಂಸೆಯನ್ನು ತೋರಿಸಿದಷ್ಟೂ ಚಲನಚಿತ್ರದ ಮಾರುಕಟ್ಟೆ ವಿಸ್ತರಿಸುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಚಂದ್ರಶೇಖರ ಕಂಬಾರ, ‘ಬರವಣಿಗೆ ಪರಿಣಾಮಕಾರಿಯಾಗಿ ಓದುಗನನ್ನು ತಲುಪಲು ನಿಶ್ಚಿತ ವಿಧಾನವನ್ನು ಅನುಸರಿಸಬೇಕು. ಆಗ ಮಾತ್ರ ಸಾಹಿತ್ಯ ಕೃತಿಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದು ಹೇಳಿದರು.
‘ಕನ್ನಡ ರಂಗಭೂಮಿ: ಕಂಬಾರರ ಹೊಸ ಪ್ರಯೋಗಗಳು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ರಂಗಕರ್ಮಿ ಸಿ. ಬಸವಲಿಂಗಯ್ಯ, ‘ಕಂಬಾರರ ಎಲ್ಲ ನಾಟಕಗಳಲ್ಲಿ ಕಥನವಿದೆ. ಅವರ ಚಿಂತನಾ ಕ್ರಮ ವಿನೂತನ ಹಾಗೂ ವಿಶಿಷ್ಟವಾದದ್ದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಎಂಟು ದಿಕ್ಕುಗಳಂತೆ ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಲಭಿಸಿದೆ. ಇದನ್ನು ಸರ್ಕಾರ ನೀಡದಿದ್ದರಿಂದ ವಸ್ತುನಿಷ್ಠ ಆಯ್ಕೆಗಳು ನಡೆಯುತ್ತವೆ. ಒಂದು ವೇಳೆ ಸರ್ಕಾರವೇ ನೀಡುವುದಾಗಿದ್ದರೆ ಪದ್ಮ ಪ್ರಶಸ್ತಿಗಳ ರೀತಿ ಹಂಚಲಾಗುತ್ತಿತ್ತು’ ಎಂದು ಹೇಳಿದರು.
‘ಕನ್ನಡ ಚಲನಚಿತ್ರ: ಕಂಬಾರರ ಪ್ರಯೋಗಶೀಲತೆ’ ಎಂಬ ವಿಷಯದ ಮೇಲೆ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ‘ಕನ್ನಡ ವಿಶ್ವವಿದ್ಯಾಲಯ: ಕಂಬಾರರ ಪ್ರಯೋಗಗಳು’ ಎಂಬ ವಿಷಯದ ಮೇಲೆ ವಿಮರ್ಶಕ ಬಸವರಾಜ ಕಲ್ಗುಡಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.