ಬೆಂಗಳೂರು: ಕೋಟಿಗಟ್ಟಲೆ ವರ್ಷಗಳಿಂದ ಬೆಳಕಿನ ಸ್ಪರ್ಶ ಆಗದಿರುವ ಚಂದ್ರನ ದಕ್ಷಿಣಧ್ರುವದಲ್ಲಿ ಭಾರಿ ಪ್ರಮಾಣದಲ್ಲಿ ಹೆಪ್ಪುಗಟ್ಟಿರುವ ನೀರು ಮತ್ತು ಖನಿಜಗಳನ್ನು ಪತ್ತೆ ಮಾಡಿಯೇ ತೀರುವ ವಿಶ್ವಾಸ ಇಸ್ರೊ ವಿಜ್ಞಾನಿಗಳಿಗಿದೆ.
ಅಲ್ಲದೆ, ಭವಿಷ್ಯದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಮಾನವರಿಗಾಗಿ ‘ಔಟ್‌ಪೋಸ್ಟ್’ ಮಾಡಿಕೊಂಡು ಚಂದ್ರ ಮತ್ತು ಇತರ ಗ್ರಹಗಳಲ್ಲಿ ಅನ್ವೇಷಣೆಗಳನ್ನು ಕೈಗೊಳ್ಳುವ ಉದ್ದೇಶ ಇಸ್ರೊ ಸೇರಿದಂತೆ ವಿಶ್ವದ ವಿವಿಧ ಬಾಹ್ಯಾಕಾಶ ಸಂಸ್ಥೆಗಳಿವೆ.
‘ಚಂದ್ರಯಾನ–2’ ಯಾನದ ಮಹತ್ವದ ಉದ್ದೇಶವೇ ಚಂದ್ರನಲ್ಲಿ ನೀರು, ಜಲಜನಕ, ಸೋಡಿಯಂ, ಪಾದರಸ ಹಾಗೂ ಇತರ ಖನಿಜಗಳನ್ನು ಪತ್ತೆ ಮಾಡುವುದಾಗಿದ್ದು, ದಕ್ಷಿಣಧ್ರುವದಲ್ಲಿ ವಿಸ್ತೃತ ಅಧ್ಯಯನವನ್ನು ಯಾವುದೇ ದೇಶ ಈವರೆಗೂ ಮಾಡಿಲ್ಲ. ಇಸ್ರೊ ಆ ಸಾಹಸಕ್ಕೆ ಕೈಹಾಕಿದೆ.
ಚಂದ್ರನ ದಕ್ಷಿಣ ಧ್ರುವದ ಪ್ರದೇಶದ ಮೇಲೆ ಕೋಟಿಗಟ್ಟಲೆ ವರ್ಷಗಳಿಂದ ಸೂರ್ಯನ ಬೆಳಕೇ ಬಿದ್ದಿಲ್ಲ. ಹೀಗಾಗಿ ಸೌರ ಮಂಡಲದ ಉಗಮದ ಕಾಲದ ಸನ್ನಿವೇಶಗಳನ್ನು ಅಧ್ಯಯನ ನಡೆಸಲು ಅನುಕೂಲವಾಗುತ್ತದೆ. ನೀರು ಮತ್ತು ಬಾಷ್ಪದ ರೂಪದಲ್ಲಿರುವ ರಾಸಾಯನಿಕಗಳು ಸೌರಮಂಡಲ ವ್ಯವಸ್ಥೆಯ ಒಳಗಿನ ರಾಸಾಯನಿಕ ಧಾತುಗಳ ಇತಿಹಾಸವನ್ನು ಅಡಗಿಸಿಕೊಂಡಿದೆ. ಅಲ್ಲದೆ, ಇಲ್ಲಿನ ಕುಳಿಗಳು ಕಾಯಂ ಆಗಿ ಕತ್ತಲಿನಲ್ಲೇ ಉಳಿದಿರುವುದರಿಂದ, ಅಲ್ಲಿ ನೀರು ಮಂಜುಗಡ್ಡೆಯ ರೂಪದಲ್ಲಿ ಇರಬಹುದು ಎಂಬುದು ಇಸ್ರೊ ವಿಜ್ಞಾನಿಗಳ ಲೆಕ್ಕಾಚಾರ.
ಕೋಟಿಗಟ್ಟಲೆ ವರ್ಷದಿಂದ ಬಿಸಿಲು ಬೀಳದೇ ಇರುವ ಕಾರಣ, ಅಲ್ಲಿ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿದೆ. ಇದರಿಂದ ಚಂದ್ರನ ಮೇಲಿರುವ ಕುಳಿಗಳಲ್ಲಿ ನೀರು ಹೆಪ್ಪುಗಟ್ಟಿರುವ ಸಾಧ್ಯತೆ ಇದೆ. ಅಪಾರ ಪ್ರಮಾಣದಲ್ಲಿ ನೀರು ಇದೆ ಎಂದು ಅಂದಾಜು ಮಾಡಲಾಗಿದೆ. ಚಂದ್ರಯಾನ–1ರಲ್ಲಿ ನೀರಿನ ಇರುವಿಕೆ ಪತ್ತೆ ಮಾಡಿತ್ತು. ಅದನ್ನು ಕಂಡುಹಿಡಿಯಲು ಆ ಪ್ರದೇಶದಲ್ಲೇ ಲ್ಯಾಂಡಿಂಗ್ ಮಾಡಲಾಗುತ್ತಿದೆ. ಅಲ್ಲಿ ಲ್ಯಾಂಡರ್ ಮತ್ತು ರೋವರ್ ಅನ್ನು ಲ್ಯಾಂಡಿಂಗ್ ಮಾಡುವುದು ಸುಲಭ ಎನ್ನುತ್ತಾರೆ ವಿಜ್ಞಾನಿಗಳು.
ಭವಿಷ್ಯದಲ್ಲಿ ಚಂದ್ರನಲ್ಲಿ ಹೋಗಿ ಮಾನವರೇ ಅನ್ವೇಷಣೆ ಮತ್ತು ಅಧ್ಯಯನ ನಡೆಸಲು ಅನುಕೂಲವಾಗಲು ದಕ್ಷಿಣ ಧ್ರುವವನ್ನು ಔಟ್‌ಪೋಸ್ಟ್ ಅಥವಾ ತಂಗುದಾಣವಾಗಿ ಬಳಸಿಕೊಳ್ಳಬಹುದಾಗಿದೆ. ಈ ಉದ್ದೇಶ ಭಾರತವಲ್ಲದೆ ಇತರ ಬಾಹ್ಯಾಕಾಶ ಶಕ್ತ ರಾಷ್ಟ್ರಗಳಿಗೂ ಇದೆ. ಇಸ್ರೊ ಅಲ್ಲದೆ,ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ, ಜಪಾನ್‌ನ ಕಗ್ಯುಯಾ ಮತ್ತು ಚೀನಾದ ಬಾಹ್ಯಾಕಾಶ ಸಂಸ್ಥೆಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಿವೆ. ಭಾರತವೂ ಸೇರಿ ಈ ಎಲ್ಲ ರಾಷ್ಟ್ರಗಳು ಚಂದ್ರನ ಕಕ್ಷೆಯಲ್ಲಿ ಉಪಗ್ರಹಗಳ ಮೂಲಕ ದಕ್ಷಿಣ ಧ್ರುವವನ್ನು ಅಧ್ಯಯನ ಮಾಡಿವೆ.
ಇದನ್ನೂ ಓದಿ:ಕತ್ತಲ ಪದರದಲ್ಲಿ ಅನಾದಿ ಕಾಲದತ್ತ ಬೆಳಕು
ಬಾಹ್ಯಾಕಾಶ ಬಾಂಧವ್ಯ: ಭೂಮಿಯ ಪ್ರಬಲ ಗುರುತ್ವಾಕರ್ಷಣೆ ಸೆಳೆತದಿಂದಾಗಿ ಚಂದ್ರನ ಒಂದು ಮುಖವನ್ನು ಮಾತ್ರ ಭೂಮಿಯ ಜನರು ಕಾಣಲು ಸಾಧ್ಯ. ಇದನ್ನು ಉಬ್ಬರವಿಳಿತದ ಬಂಧ ಅಥವಾ ಟೈಡಲ್ ಲಾಕಿಂಗ್ ಎನ್ನಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಯಿಂದ ಚಂದ್ರನಲ್ಲಿ ಸಣ್ಣ ನಡುಕಗಳು ಉಂಟಾಗುತ್ತವೆ. ಭೂಕಂಪನಗಳ (ಭೂಕಂಪದಂತೆ ಚಂದ್ರಕಂಪನ) ಚಟುವಟಿಕೆಗೂ ಕಾರಣವಾಗುತ್ತವೆ. ಇದರಿಂದ ಭೌತಿಕ ರಚನೆಯೂ ಬದಲಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಚಂದ್ರನಲ್ಲಿ ಹೆಪ್ಪುಗಟ್ಟಿರುವ ನೀರು ಶತಕೋಟಿ ವರ್ಷಗಳಷ್ಟು ಹಿಂದಿನದು. ಇದನ್ನು ಈವರೆಗೂ ಸೂರ್ಯನ ಕಿರಣಗಳು ಸ್ಪರ್ಶಿಸಲಿಲ್ಲ ಮತ್ತು ಭೂವಿಜ್ಞಾನದ ಪ್ರಕ್ರಿಯೆಗಳಿಂದಲೂ ಕದಲಲಿಲ್ಲ. ಆದ್ದರಿಂದ ಹೆಪ್ಪುಗಟ್ಟಿರುವ ನೀರು ಕರಗಿಲ್ಲ. ಇಂತಹ ಕ್ರಿಯೆಗಳು ಜರುಗಿದ್ದರೆ ಚಂದ್ರನ ಮೇಲ್ಮೈ ಬೇರೆಯದೇ ರೀತಿ ಆಗುತ್ತಿತ್ತು.
ಟಿ.ವಿ.ಗಳಲ್ಲಿ ನೇರ ಪ್ರಸಾರ
ಚಂದ್ರಯಾನ–2 ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಸೆಪ್ಟಂಬರ್ 7ರ ಶನಿವಾರ ಚಂದ್ರನ ನೆಲದ ಮೇಲೆ ಇಳಿಯಲಿವೆ. ಆ ದೃಶ್ಯದ ನೇರ ಪ್ರಸಾರಕ್ಕೆ ಇಸ್ರೊ ವ್ಯವಸ್ಥೆ ಮಾಡಿದೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ನೇರ ಪ್ರಸಾರ ಮಾಡಲಿದೆ.
ಅಲ್ಲದೆ, ಇಸ್ರೊ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದು, ಅದರಲ್ಲಿ ವಿಜೇತರಾದವರು ಪ್ರಧಾನಿ ನರೇಂದ್ರಮೋದಿ ಜತೆ ಕುಳಿತು ಐತಿಹಾಸಿಕ ಲ್ಯಾಂಡಿಂಗ್ ದೃಶ್ಯಾವಳಿಗಳನ್ನು ವೀಕ್ಷಿಸಬಹುದು.
ಚಂದ್ರನ ಮೇಲೆ ‘ವಿಕ್ರಮ್’ ಮತ್ತು ‘ಪ್ರಗ್ಯಾನ್’ ಅಡಿ ಇಡಲು ಇನ್ನು 12 ದಿನಗಳು ಮಾತ್ರ ಬಾಕಿ ಉಳಿದಿವೆ. ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ಇನ್ನಷ್ಟು ಹತ್ತಿರ ಕಳಿಸುವ ಎರಡನೇ ಪ್ರಯತ್ನ ಯಶಸ್ವಿಯಾದ ನಂತರ ನೌಕೆ ಕಕ್ಷೆಯಲ್ಲಿ ನಿರೀಕ್ಷಿತ ರೀತಿಯಲ್ಲಿ ಮುನ್ನಡೆಯುತ್ತಿದೆ. ಮುಂದಿನ ಕಕ್ಷೆ ಬದಲಾವಣೆ ಆಗಸ್ಟ್ 28ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.