ADVERTISEMENT

ಶಿವಕುಮಾರ್‌ ಕ್ಷಮೆ ಅಸಂಬದ್ಧ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:15 IST
Last Updated 15 ಏಪ್ರಿಲ್ 2019, 20:15 IST

ಬೆಂಗಳೂರು: ‘ಚುನಾವಣಾ ಪ್ರಚಾರದ ವೇಳೆ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಮಾಡಿದ ಶಿಫಾರಸಿಗಾಗಿ ಸಚಿವ ಡಿ.ಕೆ. ಶಿವಕುಮಾರ್‌ ಕ್ಷಮೆಯಾಚಿಸಿದ್ದು ಖಂಡನೀಯ’ ಎಂದು ಚನ್ನಬಸವೇಶ್ವರ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ನಮ್ಮ ಅಸ್ಮಿತೆಗಾಗಿ ನಡೆದದ್ದು. ಶಿವಕುಮಾರ್‌ ಅವರಿಗೂ ನಮ್ಮ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಕ್ಷಮೆ ಕೇಳಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಹೇಳಿದರು.

‘ಲಿ‌ಂಗಾಯತರು ಹಿಂದೂ ಧರ್ಮದವರು. ಹೀಗಾಗಿ ಮಾನ್ಯತೆ ಬೇಡ ಎಂದು ಪೇಜಾವರ ಸ್ವಾಮೀಜಿ ಹೇಳಿಕೆ ನೀಡಿದ್ದರು. ಅವರು ನಮ್ಮ ಧರ್ಮದ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು’ ಎಂದು ವಿನಂತಿಸಿದರು.

ADVERTISEMENT

‘ಮಹಾರಾಷ್ಟ್ರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಅಶೋಕ್‌ ಚೌವ್ಹಾಣ್‌ ಅವರು ನಮ್ಮ ಧರ್ಮದ ಮಾನ್ಯತೆಗೆ ಬೆಂಬಲಿಸಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದಾರೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು.

ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ್‌, ಬಸವದಳ ಯುವ ಮುಖಂಡ ಕೆ.ಎಸ್‌.ಕೋರಿಶೆಟ್ಟರ್‌, ನ್ಯಾಯವಾದಿ ರವಿಕಾಂತ್‌ ಬಿರಾದಾರ್‌, ಬಸವಂತರಾವ್‌ ಬಿರಾದಾರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.