ADVERTISEMENT

ಚನ್ನವೀರ ಕಣವಿಗೆ ಜ್ಞಾನಪೀಠ ಸಿಗಬೇಕಿತ್ತು: ಸಾಹಿತಿ ಎಸ್.ಜಿ. ಸಿದ್ದರಾಮಯ್ಯ

ಗೀತ ಗೌರವ ಹಾಗೂ ಅಭಿನಂದನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:32 IST
Last Updated 7 ಜುಲೈ 2024, 15:32 IST
   

ಬೆಂಗಳೂರು: ‘ಜ್ಞಾನಪೀಠ ಪ್ರಶಸ್ತಿಯಿಂದ ವಂಚಿತರಾದ ಶ್ರೇಷ್ಠ ಕನ್ನಡ ಸಾಹಿತಿಗಳಲ್ಲಿ ಚನ್ನವೀರ ಕಣವಿ ಅವರು ಕೂಡ ಒಬ್ಬರು ಎಂಬುದನ್ನು ಯಾರೂ ಮರೆಯುವಂತಿಲ್ಲ’ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು. 

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಭಾನುವಾರ ಆಯೋಜಿಸಿದ್ದ ‘ಕಾವ್ಯ ಪಾರಿಜಾತ ಸಮನ್ವಯ ಕವಿ ಚನ್ನವೀರ ಕಣವಿ ಹಾಗೂ ಕಾವ್ಯ ಸೌಗಂಧಿಕಾ ಡಾ.ಎಚ್.ಎಸ್. ವೆಂಕಟೇಶಮೂರ್ತಿ–80’ ಅವರಿಗೆ ಗೀತ ಗೌರವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡದ ಕೆಲವು ಪ್ರಮುಖ ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು. ಕನ್ನಡ ಸಾಹಿತ್ಯ ಇದುವರೆಗೂ ಸಮೃದ್ಧವಾಗಿ ಬೆಳೆಯುತ್ತಿದ್ದರೆ ಅದಕ್ಕೆ ನಮ್ಮ ಕವಿಗಳ ಕೊಡುಗೆ ಬಹಳಷ್ಟಿದೆ. ಎಲ್ಲ ಸಂಸ್ಕೃತಿಗಳ ತತ್ವ ಸಿದ್ಧಾಂತಗಳ ಸಾರವನ್ನು ಹೀರಿಕೊಂಡು ತಮ್ಮ ಕಾವ್ಯಗಳಲ್ಲಿ ಒಡಮೂಡಿಸಿದ ಕೀರ್ತಿ ಚನ್ನವೀರ ಕಣವಿ ಅವರಿಗೆ ಸಲ್ಲುತ್ತದೆ. ನವೋದಯ ಸಾಹಿತ್ಯ ಕಾಲದಲ್ಲಿ ಭಾವಗೀತೆಗಳು ಹೆಚ್ಚು ರಚನೆಯಾದವು. ನಂತರದ ಸಾಹಿತ್ಯ ಪ್ರಕಾರಗಳಲ್ಲಿ ಹೆಚ್ಚು ಭಾವಗೀತೆಗಳು ರಚನೆಯಾಗಲಿಲ್ಲ’ ಎಂದರು.

ADVERTISEMENT

ಸಾಹಿತಿ ನಾ. ದಾಮೋದರ ಶೆಟ್ಟಿ ಮಾತನಾಡಿ, ‘ಎಚ್.ಎಸ್. ವೆಂಕಟೇಶಮೂರ್ತಿ ಅವರ ಬಗ್ಗೆ ಮಾತನಾಡುವುದೇ ಒಂದು ಸೊಗಸು. ಅವರ ಬಹುಪಾಲು ಕಾವ್ಯವನ್ನು ಗಮನಿಸಿದ್ದಲ್ಲಿ ಯಾವುದೇ ಸಂದರ್ಭದಲ್ಲೂ ಏಳು–ಬೀಳುಗಳನ್ನು ಕಾಣಲು ಸಾಧ್ಯವಿಲ್ಲ. ಎಚ್‌.ಎಸ್.ವೆಂಕಟೇಶಮೂರ್ತಿ ಅವರ ಬುದ್ಧ ಚರಣ ಮಹಾಕಾವ್ಯ ಕನ್ನಡ ಕಾವ್ಯ ಪರಂಪರೆಗೆ ಕೊಟ್ಟ ದೊಡ್ಡ ಕೊಡುಗೆ’ ಎಂದು ಹೇಳಿದರು.

ಚನ್ನವೀರ ಕಣವಿ ಹಾಗೂ ಎಚ್.ಎಸ್. ವೆಂಕಟೇಶ್‌ಮೂರ್ತಿ ಅವರು ರಚಿಸಿರುವ ಭಾವಗೀತೆಗಳ ಸಂಗೀತ ಕಛೇರಿಯ ಮೂಲಕ ಗೀತ ಗೌರವ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.