ರಾಜರಾಜೇಶ್ವರಿನಗರ: ಇಲ್ಲಿನ ಬಿಬಿಎಂಪಿ ವಲಯ ಆಯುಕ್ತರ ಕಚೇರಿಯಲ್ಲಿರುವ ಹಲವು ವಿಭಾಗಗಳ ಕೊಠಡಿಯ ಕಿಟಕಿ ಗಾಜುಗಳು ಒಡೆದಿವೆ. ಬಾಗಿಲು, ಕಿಟಕಿಗಳ ಚಿಲಕಗಳು ಕಿತ್ತು ಹೋಗಿವೆ.
ಸಂದರ್ಶಕರು ಕುಳಿತುಕೊಳ್ಳುವ ಆಸನಗಳು ಮುರಿದಿವೆ. ಶೌಚಾಲಯವೂ ಅವ್ಯವಸ್ಥೆಯಾಗಿದೆ. ಕಿಟಕಿ ಗಾಜುಗಳು ಒಡೆದಿರುವುದರಿಂದ ಮಳೆ ಬಂದಾಗ ಇರಿಚಲು(ಹನಿಗಳು) ಕೊಠಡಿ ಒಳಕ್ಕೆ ಬರುತ್ತವೆ. ಜೋರಾಗಿ ಗಾಳಿ ಬೀಸಿದರೆ ಟೇಬಲ್ ಮೇಲಿದ್ದ ಹಾಳೆಗಳು ಹಾರಿ ಹೋಗುತ್ತವೆ. ಕೆಲಸ ನಿರ್ವಹಿಸುವುದೂ ಕಷ್ಟ. ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ಕಂಪ್ಯೂಟರ್‌ಗಳ ಮೇಲೆ ನೀರು ಬಿದ್ದು ಹಾಳಾಗುತ್ತವೆ. ಕೊಠಡಿಯೊಳಗೆ ನೀರು ತುಂಬಿಕೊಂಡರೆ, ಅದನ್ನು ಹೊರ ಹಾಕುವುದು ಕಷ್ಟದ ಕೆಲಸ ಎಂದು ಕಚೇರಿ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.
ಒಡೆದಿರುವ ಕಿಟಕಿಗಳಿಗೆ ಪ್ಲಾಸ್ಟಿಕ್ ಚೀಲ, ರಟ್ಟುಗಳನ್ನು ಇಟ್ಟು, ಮಳೆ ನೀರು ಬರದಂತೆ ಸಿಬ್ಬಂದಿ ತಡೆಯುತ್ತಿದ್ದಾರೆ. ಕಿಟಕಿಗಳನ್ನು ಮುಚ್ಚದಿದ್ದರೆ ಫೈಲ್‌ಗಳು, ಕಂಪ್ಯೂಟರ್‌ಗಳು ಮಳೆ ನೀರಿನಲ್ಲಿ ತೋಯ್ದು ಹಾಳಾಗುತ್ತವೆ ಎಂಬುದು ಅವರ ಆತಂಕ.
ವಲಯ ಆಯುಕ್ತರ ಕಚೇರಿಯಲ್ಲಿ ಕಂದಾಯ, ನಗರ ಯೋಜನೆ, ಕಲ್ಯಾಣ ಶಾಖೆ, ಆರೋಗ್ಯ, ಮುಖ್ಯ ಎಂಜಿನಿಯರ್ ಕಚೇರಿಗಳಿವೆ. ಎಲ್ಲ ಕಿಟಕಿಗಳಿಗೆ ಚೀಲ ಕಟ್ಟಿಕೊಂಡು ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.
ನಾನು ಈ ಕಚೇರಿಗೆ ಬಂದು ಬಂದು ಒಂದು ವಾರವಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತೇನೆ.
– ಸ್ವಯಂ ಪ್ರಭ.ಕೆ.,ಮುಖ್ಯ ಎಂಜಿನಿಯರ್, ರಾಜರಾಜೇಶ್ವರಿ ನಗರ ವಲಯ, ಬಿಬಿಎಂಪಿ
ಕಟ್ಟಡದ ದುರಸ್ತಿ ಮತ್ತು ಲಿಫ್ಟ್ ಅಳವಡಿಸಲು ₹30 ಲಕ್ಷ ವೆಚ್ಚದಲ್ಲಿ ಟೆಂಡರ್ ಆಗಿದೆ. ಕೂಡಲೇ ಕಾಮಗಾರಿ ಆರಂಭಿಸಲಾಗುವುದು.
– ಟಿ.ಎಂ. ಶಶಿಕುಮಾರ್, ಕಾರ್ಯಪಾಲಕ ಎಂಜಿನಿಯರ್, ಯೋಜನೆ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.