ಬೆಂಗಳೂರು: ಸುಸಜ್ಜಿತವಾದ ನಾಲ್ಕು ಮಹಡಿಗಳ ಕಟ್ಟಡವಿದ್ದರೂ ಚಿಕಿತ್ಸೆಗೆ ವೈದ್ಯರು ಹಾಗೂ ಶುಶ್ರೂಷಕರಿಲ್ಲ. ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳಿದ್ದರೂ ಅದರ ನಿರ್ವಹಣೆಗೆ ತಂತ್ರಜ್ಞರಿಲ್ಲ.
ಇದು ನಗರದ ಕೇಂದ್ರ ಭಾಗವಾದ ಶಿವಾಜಿನಗರದಲ್ಲಿರುವ ಚರಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಿತಿ. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಎಬಿವಿಎಂಸಿಆರ್‌ಐ) ಈ ಆಸ್ಪತ್ರೆ, ಎರಡು ವರ್ಷದಿಂದ ನಿರುಪಯುಕ್ತವಾಗಿದೆ. ಸದ್ಯ ಈ ಆಸ್ಪತ್ರೆಯಲ್ಲಿ ತಲಾ ಇಬ್ಬರು ಶುಶ್ರೂಷಕರು, ಗ್ರೂಪ್ ಡಿ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಟ್ಟಡ ತಲೆಯೆತ್ತಿ ನಾಲ್ಕು ವರ್ಷವಾದರೂ ಅಗತ್ಯವಿರುವ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯ ನೇಮಕಾತಿ ನಡೆಯಲಿಲ್ಲ. ಇದರಿಂದ ಇಲ್ಲಿ ವೈದ್ಯಕೀಯ ಸೇವೆ ದೊರೆಯದಂತಾಗಿದೆ.
ಬ್ರಾಡ್‍ವೇ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ ಈ ಆಸ್ಪತ್ರೆಯನ್ನು, 2020ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದರು. ಈ ಕಟ್ಟಡ ನಿರ್ಮಾಣಕ್ಕೆ ಸಹಯೋಗ ನೀಡಿದ್ದ ಇನ್ಫೊಸಿಸ್ ಫೌಂಡೇಷನ್, ಆಸ್ಪತ್ರೆಗೆ ಅವಶ್ಯಕ ಯಂತ್ರೋಪಕರಣ, ಹಾಸಿಗೆ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲು ₹ 11 ಕೋಟಿ ದೇಣಿಗೆ ನೀಡಿತ್ತು. ಈ ಆಸ್ಪತ್ರೆಯನ್ನು ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸರ್ಕಾರ ಬಳಸಿಕೊಂಡಿತ್ತು. ಆ ವೇಳೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಈ ಆಸ್ಪತ್ರೆಗೆ ಬಂದು, ಸೇವೆ ಸಲ್ಲಿಸಿದ್ದರು. ಕೆಲ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಇಲ್ಲಿ ಒಳರೋಗಿಗಳ ವೈದ್ಯಕೀಯ ಸೇವೆ ಸ್ಥಗಿತಗೊಂಡಿತ್ತು.
ಕಳೆದ ವರ್ಷಾಂತ್ಯದವರೆಗೆ ಹೃದಯ ಹಾಗೂ ನರರೋಗ ವಿಜ್ಞಾನ ವಿಭಾಗಗದಲ್ಲಿ ಹೊರರೋಗಿ ಸೇವೆ ಮಾತ್ರ ಒದಗಿಸಲಾಗಿತ್ತು. ಬೌರಿಂಗ್ ಆಸ್ಪತ್ರೆಯ ವೈದ್ಯರು ಇಲ್ಲಿಗೆ ಬಂದು ಸೇವೆ ನೀಡುತ್ತಿದ್ದರು. ಈಗ ಆ ಸೇವೆಯೂ ಇಲ್ಲವಾಗಿದ್ದು, ಖಾಲಿ ಕಟ್ಟಡ ಬಿಕೋ ಎನ್ನುತ್ತಿದೆ.
ಬಳಕೆಯಾಗದ ಯಂತ್ರೋಪಕರಣ: ಎರಡು ವರ್ಷದಿಂದ ಆಸ್ಪತ್ರೆಯಲ್ಲಿ ಒಳರೋಗಿಗಳ ವಿಭಾಗ ಕಾರ್ಯನಿರ್ವಹಿಸುತ್ತಿಲ್ಲ. ತೀವ್ರ ನಿಗಾ ಘಟಕ (ಐಸಿಯು), ಪ್ರಯೋಗಾಲಯ ಸೇರಿ ವಿವಿಧ ವಿಭಾಗಗಳ ಯಂತ್ರೋಪಕರಣಗಳು ಬಳಕೆಯಾಗುತ್ತಿಲ್ಲ. ಇದರಿಂದಾಗಿ ಯಂತ್ರೋಪಕರಣಗಳು ದೂಳು ಹಿಡಿದಿವೆ. ಆಸ್ಪತ್ರೆಯ ಮೂರು ಗೇಟ್‌ಗಳಲ್ಲಿ ಎರಡು ಗೇಟ್‌ಗಳಿಗೆ ಬೀಗ ಹಾಕಲಾಗಿದೆ. ಆವರಣದಲ್ಲಿ ಎಲ್ಲೆಂದರೆಲ್ಲಿ ಕಸ ಬಿದ್ದಿದ್ದು, ಹಿಂಭಾಗದಲ್ಲಿ ಕೋಳಿ ತ್ಯಾಜ್ಯವನ್ನು ಹಾಕಲಾಗಿದೆ. ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆ ಸುತ್ತ ಮೂಗು ಮುಚ್ಚಿಕೊಂಡು ಸಾಗಬೇಕಾಗಿದೆ.
‘ಸರ್ಕಾರಗಳು ಕಟ್ಟಡ ನಿರ್ಮಾಣಕ್ಕೆ ತೋರುವ ಆಸಕ್ತಿಯನ್ನು ವೈದ್ಯರು ಹಾಗೂ ಶುಶ್ರೂಷಕರ ನೇಮಕಕ್ಕೆ ತೋರುವುದಿಲ್ಲ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಆಸ್ಪತ್ರೆಯಿದ್ದರೂ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದಾಗಿ ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ, ದಿನವಿಡೀ ಕಾಯಬೇಕಾಗಿದೆ. ಈ ಸರ್ಕಾರವಾದರೂ ಆದ್ಯತೆ ಮೇರೆಗೆ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ನಡೆಸಿ, ವೈದ್ಯಕೀಯ ಸೇವೆ ಪ್ರಾರಂಭಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
ಆಸ್ಪತ್ರೆಯನ್ನು ಪುನರಾರಂಭಿಸಲು ₹ 22 ಕೋಟಿ ಬಜೆಟ್‌ಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ವೈದ್ಯರು ಶುಶ್ರೂಷಕರು ಹಾಗೂ ಅಗತ್ಯ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
-ಡಾ. ಮನೋಜ್ ಕುಮಾರ್ ಎಬಿವಿಎಂಸಿಆರ್‌ಐ ಡೀನ್
ಅತ್ಯಾಧುನಿಕ ಸೌಲಭ್ಯ
ಈ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರಣ ವ್ಯವಸ್ಥೆಯ 20 ಹಾಸಿಗೆ ಸಾಮರ್ಥ್ಯದ ತೀರ್ವ ನಿಗಾ ಘಟಕ (ಐ.ಸಿ.ಯು) ಇದೆ. 20 ವೆಂಟಿಲೇಟರ್‌ಗಳನ್ನೂ ಕಲ್ಪಿಸಲಾಗಿದೆ. ಹೊರರೋಗಿಗಳಿಗೆ ಸಾಮಾನ್ಯ ಮತ್ತು ತುರ್ತು ಚಿಕಿತ್ಸಾ ಸಲಹಾ ವ್ಯವಸ್ಥೆ ಪ್ರಯೋಗಾಲಯ ಡಯಾಲಿಸಿಸ್ ಸೌಲಭ್ಯ ತಲಾ 2 ಹಾಸಿಗೆ ಹಾಗೂ 5 ಹಾಸಿಗೆಗಳ ಕೊಠಡಿಗಳ ವಾರ್ಡುಗಳು ಶಸ್ತ್ರಚಿಕಿತ್ಸಾ ಕೊಠಡಿ ಸಿಸಿಯು ಕ್ಯಾಥ್ ಲ್ಯಾಬ್ ಸೇರಿ ವಿವಿಧ ಸೌಕರ್ಯಗಳನ್ನು ಆಸ್ಪತ್ರೆಯು ಒಳಗೊಂಡಿದೆ. ಮಳೆ ನೀರನ್ನು ಸಂಗ್ರಹಿಸಿ ಬಳಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. 750 ಕೆ.ವಿ ವಿದ್ಯುತ್ ಸೌಲಭ್ಯ ಹಾಗೂ ಜನರೇಟರ್ ವ್ಯವಸ್ಥೆಯನ್ನು ಒದಗಿಸಲಾಗಿದೆ. ನಿತ್ಯ ಬಳಕೆಗೆ ಎರಡು ಲಿಫ್ಟ್‌ಗಳು ಹಾಗೂ ಒಂದು ಸರ್ವೀಸ್ ಲಿಫ್ಟ್ ಆಸ್ಪತ್ರೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.