ಬೆಂಗಳೂರು: ‘ಬ್ರಾಹ್ಮಣ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎನ್ನಲಾದ ಪ್ರಕರಣದಲ್ಲಿ ನಟ ಚೇತನ್ ವಿರುದ್ಧ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲು ಬಸವನಗುಡಿ ಠಾಣೆ ಪೊಲೀಸರು, ಗೃಹ ಇಲಾಖೆ ಅನುಮತಿ ಕೋರಿದ್ದಾರೆ.
ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಎಂಬುವರು ಚೇತನ್ ವಿರುದ್ಧ ದೂರು ನೀಡಿದ್ದರು. ಧಾರ್ಮಿಕ ಭಾವನೆ ಕೆರಳಿಸುವುದು (ಐಪಿಸಿ 129-ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153-ಬಿ) ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.
‘ಪ್ರಕರಣ ಸಂಬಂಧ ಚೇತನ್ ಅವರನ್ನು ವಿಚಾರಣೆ ನಡೆಸಲಾಗಿದೆ. ಪುರಾವೆಗಳನ್ನೂ ಸಂಗ್ರಹಿಸಲಾಗಿದೆ. ಅವಹೇಳನಕಾರಿ ಹೇಳಿಕೆಯ ವಿಡಿಯೊಗಳನ್ನು ಪರಿಶೀಲಿಸಲಾಗಿದೆ. ಇಂಥ ಪ್ರಕರಣದಲ್ಲಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸರ್ಕಾರದ ಅನುಮತಿ ಬೇಕು. ಹೀಗಾಗಿ, ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ. ಅದಕ್ಕೆ ಪ್ರತಿಕ್ರಿಯೆ ಬರಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.