ADVERTISEMENT

ರೈತನ ಹೆಸರಿನಲ್ಲಿ ನಕಲಿ ಮತದಾನ ಗುರುತಿನ ಚೀಟಿ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 7 ಮೇ 2023, 21:36 IST
Last Updated 7 ಮೇ 2023, 21:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೈತರೊಬ್ಬರ ಹೆಸರಿನಲ್ಲಿ ನಕಲಿ ಮತದಾನ ಗುರುತಿನ ಚೀಟಿ (ಎಪಿಕ್‌) ಹಾಗೂ ಇತರೆ ದಾಖಲೆಗಳನ್ನು ಸೃಷ್ಟಿಸಿ ಅಪರಾಧ ಪ್ರಕರಣದ ಆರೋಪಿಗೆ ಜಾಮೀನು ಕೊಡಿಸಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆಂಗಳೂರು ಉತ್ತರ ತಾಲ್ಲೂಕಿನ ರೈತ ಅರಸಪ್ಪ ಅವರು ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಕೃಷ್ಣ ಅಲಿಯಾಸ್ ವಿಜಯಕೃಷ್ಣ ಭೋಸ್ಲೆ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರೈತ ಅರಸಪ್ಪ ಅವರಿಗೆ ಮೇ 3ರಂದು ವಾಟ್ಸ್‌ಆ್ಯಪ್‌ನಲ್ಲಿ ನೋಟಿಸ್ ಕಳುಹಿಸಿದ್ದ ಗ್ರಾಮ ಲೆಕ್ಕಾಧಿಕಾರಿ, ಜಾಮೀನು ಶ್ಯೂರಿಟಿ ಮೊತ್ತ ₹ 50 ಸಾವಿರ ಪಾವತಿಸುವಂತೆ ಹೇಳಿದ್ದರು. ಆದರೆ, ತಾವು ಯಾರಿಗೂ ಜಾಮೀನು ನೀಡಿಲ್ಲವೆಂದು ಅರಸಪ್ಪ ಉತ್ತರಿಸಿದ್ದರು. ನ್ಯಾಯಾಲಯಕ್ಕೆ ಹೋಗಿ ಮಾಹಿತಿ ತಿಳಿದುಕೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿ ಹೇಳಿದ್ದರು.’

ADVERTISEMENT

‘ನ್ಯಾಯಾಲಯಕ್ಕೆ ಹಾಜರಾಗಿದ್ದ ಅರಸಪ್ಪ, ಜಾಮೀನು ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಆಗ ನಕಲಿ ಮತದಾನ ಗುರುತಿನ ಚೀಟಿ ಹಾಗೂ ಇತರೆ ದಾಖಲೆ ಸೃಷ್ಟಿಸಿದ್ದ ಪ್ರಕರಣ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

ಪಹಣಿ ಬಳಸಿ ಕೃತ್ಯ: ‘ಅರಸಪ್ಪ ಅವರ ಜಮೀನಿನ ಪಹಣಿಯನ್ನು ಆನ್‌ಲೈನ್ ಮೂಲಕ ಪಡೆದುಕೊಂಡಿದ್ದ  ಆರೋಪಿಗಳು, ಅದನ್ನು ಬಳಸಿಕೊಂಡು ಹಲವು ದಾಖಲೆ ಸಿದ್ದಪಡಿಸಿದ್ದರು. ಅರಸಪ್ಪ  ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ಹುಟ್ಟು ಹಾಕಿದ್ದರು. ಆತನೇ ಅಸಲಿ ಅರಸಪ್ಪನೆಂದು ಹೇಳಿದ್ದರು’ ಎಂದು ರೈತ ದೂರಿನಲ್ಲಿ ತಿಳಿಸಿದ್ದಾರೆ.

‘ಸುಳ್ಳು ವಾಸದ ವಿಳಾಸ ಸೃಷ್ಟಿಸಿದ್ದ ಆರೋಪಿಗಳು, ಅದರ ದಾಖಲೆ ಬಳಸಿ ನಕಲಿ ಮತದಾನ ಗುರುತಿನ ಚೀಟಿಯನ್ನೂ ಸಿದ್ಧಪಡಿಸಿದ್ದರು. ನಂತರ, ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿ ಕೃಷ್ಣಗೆ ಜಾಮೀನು ಕೊಡಿಸಿರುವುದು ಗೊತ್ತಾಗಿದೆ’ ಎಂದು ರೈತ ಹೇಳಿದ್ದಾರೆ.

 ‘ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ ಕೃಷ್ಣನನ್ನು ಜೈಲಿನಿಂದ  ಹೊರಗೆ ಕರೆತರಲು ಆರೋಪಿಗಳು ಕೃತ್ಯ ಎಸಗಿದ್ದಾರೆ. ಕೃಷ್ಣನನ್ನು ವಿಚಾರಣೆ ನಡೆಸಬೇಕಿದೆ. ನಕಲಿ ಅರಸಪ್ಪ ಹಾಗೂ ಇತರರನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.