ಬೆಂಗಳೂರು: ಮೃತ ಚಿಕ್ಕಪ್ಪನೇ ತನ್ನ ಅಪ್ಪನೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಆರೋಪಕ್ಕೆ ಸಿಲುಕಿರುವ ರಾಮನಗರ ಜಿಲ್ಲೆಯ ಗ್ರಾಮ ಲೆಕ್ಕಿಗ ಜಗನ್ನಾಥ್ ನೆತ್ತಿ ಮೇಲೆ ಈಗ ಶಿಸ್ತುಕ್ರಮದ ಕತ್ತಿ ತೂಗುತ್ತಿದೆ.
ಜಗನ್ನಾಥ್ ವಿರುದ್ಧ ಹೆಡ್‌ಕಾನ್‌ಸ್ಟೆಬಲ್ ದಿ.ಬೋರೇಗೌಡ ಅವರ ಮಗಳು ಬಿ.ಲತಾ ಡಿ.16ರಂದು ಬ್ಯಾಟರಾಯನಪುರ ಠಾಣೆಯ ಮೆಟ್ಟಿಲೇರಿದ್ದಾರೆ. ‘ಜಗನ್ನಾಥ್ ನನ್ನ ಒಡ ಹುಟ್ಟಿದವನಲ್ಲ. ಆತ ದೊಡ್ಡಪ್ಪನ ಮಗ. ಆದರೆ, ತಾನೂ ಬೋರೇಗೌಡ ಅವರ ಮಗ ಎಂಬಂತೆ ದಾಖಲೆ ಸೃಷ್ಟಿಸಿ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಂಡಿದ್ದಾನೆ. ಈ ವಿಚಾರ ಇತ್ತೀಚೆಗೆ ಗೊತ್ತಾಯಿತು. ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸಿ’ ಎಂದು ಲತಾ ಮನವಿ ಮಾಡಿದ್ದಾರೆ.
‘ಅನುಕಂಪ’ವೇ ಇಲ್ಲ: ‘1971ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ನಮ್ಮ ತಂದೆ ಟಿ.ಬೋರೇಗೌಡ, ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ಆಗಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರಿಗೆ ನಾನು ಹಾಗೂ ಅಣ್ಣ ವೆಂಕಟೇಶ್ ಇಬ್ಬರೇ ಮಕ್ಕಳು’ ಎಂದು ಲತಾ ದೂರಿನಲ್ಲಿ ಹೇಳಿದ್ದಾರೆ.
‘2004ರಲ್ಲಿ ಅಣ್ಣ ಮೃತಪಟ್ಟನು. ಈ ಸಂದರ್ಭದಲ್ಲಿ ಕಲಾಸಿಪಾಳ್ಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ, ಖಿನ್ನತೆಗೆ ಒಳಗಾಗಿ ಹಾಸಿಗೆ ಹಿಡಿದರು. 2005ರ ಫೆ.14ರಂದು ಅವರೂ ಕೊನೆಯುಸಿರೆಳೆದರು. ಆ ನಂತರ ದೊಡ್ಡಪ್ಪನ ಮಗ ಎಂ.ಜಗನ್ನಾಥ್ ಪರಿಹಾರ, ಪಿಂಚಣಿ ಹಾಗೂ ಸರ್ಕಾರದ ಸವಲತ್ತುಗಳನ್ನು ತಾನು ಪಡೆಯುವ ಸಲುವಾಗಿ ‘ನಾನು ಬೋರೇಗೌಡ ಅವರ ಮಗ’ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ನಾಮಿನಿ ಸೇವಾ ಪುಸ್ತಕದಲ್ಲೂ ತನ್ನ ಹೆಸರು ಸೇರಿಸಿದ್ದ. ತಾಯಿ ಅನಕ್ಷರಸ್ಥರಾದ ಕಾರಣ ಅವರಿಗೆ ಇದೆಲ್ಲ ಗೊತ್ತೇ ಆಗಿರಲಿಲ್ಲ.’
‘ಸರ್ಕಾರ ಪರಿಹಾರವಾಗಿ ಕೊಟ್ಟ ₹ 10 ಲಕ್ಷವನ್ನು ತಾನೇ ಇಟ್ಟುಕೊಂಡ ಆತ, ಪಿಂಚಣಿಯೂ ತನ್ನ ಖಾತೆಗೇ ಬರುವಂತೆ ಮಾಡಿಕೊಂಡಿದ್ದ. ಆ ನಂತರ ಆತನ ಕಣ್ಣು ಸರ್ಕಾರಿ ಕೆಲಸದ ಮೇಲೆ ಬಿತ್ತು. ‘ಎಂ.ಜಗನ್ನಾಥ್’ ಆದ ಆತ, ಎಸ್ಸೆಸ್ಸೆಲ್ಸಿ ಬೋರ್ಡ್‌ನಲ್ಲಿ ‘ಬಿ.ಜಗನ್ನಾಥ್’ ಎಂದು ದಾಖಲೆ ತಿದ್ದಿಸಿದ್ದ. ಬಳಿಕ ಅವುಗಳನ್ನೇ ಸರ್ಕಾರಕ್ಕೆ ಸಲ್ಲಿಸಿ ಅನುಕಂಪದ ಆಧಾರದಡಿ ಗ್ರಾಮ ಲೆಕ್ಕಿಗ ಕೆಲಸ ಗಿಟ್ಟಿಸಿಕೊಂಡ.’
‘ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಆತನನ್ನು ಎರಡು ವರ್ಷಗಳ ಹಿಂದೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ತಂದೆಯ ಹೆಸರು ಬೋರೇಗೌಡ ಎಂದು ಹೇಳಿರುವ ವಿಚಾರ ಆಗ ಗೊತ್ತಾಯಿತು. ಇದರಿಂದ ಅನುಮಾನಗೊಂಡು, ಕೆಲಸಕ್ಕೆ ಸೇರಿದಾಗ ಆತ ಸಲ್ಲಿಸಿರುವ ದಾಖಲೆಗಳನ್ನು ಹುಡುಕಿಕೊಂಡು ಹೊರಟೆ. ಇತ್ತೀಚೆಗೆ ಅವು ಸಿಕ್ಕವು’ ಎಂದು ವಿವರಿಸಿದ್ದಾರೆ.
ತಾಯಿ ಸಹಿ ನಕಲು: ‘ನನ್ನ ತಾಯಿ ಜಯಮ್ಮ ಅವರೇ ಕೆಲಸ ಕೋರಿರುವಂತೆ ಅರ್ಜಿ ಬರೆದಿದ್ದ ಜಗನ್ನಾಥ್, ‘ನನ್ನ ಗಂಡ ಪೊಲೀಸ್ ಇಲಾಖೆಯಲ್ಲಿ 34 ವರ್ಷ ಕೆಲಸ ಮಾಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಅವರನ್ನು ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ, ಅನುಕಂಪದ ಆಧಾರದಡಿ ನನ್ನ ಮಗ ಬಿ.ಜಗನ್ನಾಥ್‌ಗೆ ಸರ್ಕಾರಿ ಕೆಲಸ ಕೊಡಬೇಕೆಂದು ಮನವಿ ಮಾಡುತ್ತೇನೆ’ ಎಂದು ಅದರಲ್ಲಿದೆ. ನನ್ನ ತಾಯಿಯ ಸಹಿಯನ್ನೂ ಆತನೇ ಮಾಡಿ, ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಹೀಗಾಗಿ, ಠಾಣೆ ಮೆಟ್ಟಿಲೇರಿದ್ದೇನೆ’ ಎಂದು ಲತಾ ವಿವರಿಸಿದ್ದಾರೆ.
‘ದಯವಿಟ್ಟು ಮನೆ ಮಗ ಅನ್ನಿ’
‘ಜಗನ್ನಾಥ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾಗ ಆತನ ತಂದೆ ನಮಗೆ ಕರೆ ಮಾಡಿದ್ದರು. ಪೊಲೀಸರು ವಿಚಾರಣೆಗಾಗಿ ಮನೆಗೆ ಬಂದರೆ, ‘ಜಗನ್ನಾಥ್ ಇದೇ ಮನೆಯ ಮಗ’ ಎಂದು ಸುಳ್ಳುವಂತೆ ಮನವಿ ಮಾಡಿದ್ದರು. ಅದಕ್ಕೆ ನಾವು ಒಪ್ಪಿರಲಿಲ್ಲ. ಅವರು ಆಗ ಯಾಕೆ ಹಾಗೆ ಹೇಳಿದ್ದರು ಎಂಬುದೆಲ್ಲ ಈಗ ಅರ್ಥವಾಗುತ್ತಿದೆ’ ಎಂದು ಲತಾ ಹೇಳಿದರು.
‘ವಿಚಾರಣೆಗೆ ಕರೆದಿದ್ದೇವೆ’
‘ನಕಲಿ ದಾಖಲೆ ಸೃಷ್ಟಿ (ಐಪಿಸಿ 465, 467) ಹಾಗೂ ವಂಚನೆ (419,420) ಆರೋಪಗಳಡಿ ಜಗನ್ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳ ಸಮೇತ ಬುಧವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಬ್ಯಾಟರಾಯನಪುರ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.