ADVERTISEMENT

₹10.50 ಲಕ್ಷ ವಂಚಿಸಿದ ‘ನಕಲಿ ಸಿಬಿಐ’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 23:30 IST
Last Updated 24 ನವೆಂಬರ್ 2023, 23:30 IST
   

ಬೆಂಗಳೂರು: ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ₹ 10.50 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂದ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಸವನಗುಡಿ ನಿವಾಸಿಯಾಗಿರುವ 47 ವರ್ಷದ ಉದ್ಯಮಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ನ. 15ರಂದು ಸ್ಕೈಪೇ ಆ್ಯಪ್ ಮೂಲಕ ದೂರುದಾರರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಆಧಾರ್ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆಯಿಂದ ಅಪರಾಧವಾಗಿದೆ. ಈ ಬಗ್ಗೆ ಸಿಬಿಐ ಮುಂಬೈ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯದಲ್ಲೇ ನಿಮ್ಮ ಮೊಬೈಲ್ ನಂಬರ್ ನಿಷ್ಕ್ರಿಯವಾಗಲಿದೆ.’ ಎಂದಿದ್ದ. ಇದರಿಂದ ದೂರುದಾರರು ಆತಂಕಗೊಂಡಿದ್ದರು.’

‘ಕೆಲ ಹೊತ್ತಿನ ಬಳಿಕ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ, ‘ಅಕ್ರಮ ಹಣ ವರ್ಗಾವಣೆ ಸಂಬಂಧ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ. ನಿಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ಪರಿಶೀಲನೆ ಮಾಡಬೇಕು. ಎಲ್ಲ ಮಾಹಿತಿ ತಿಳಿಸಿ’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ಮಾಹಿತಿ ಹಂಚಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು. ‘ಮಾಹಿತಿ ತಿಳಿದುಕೊಂಡಿದ್ದ ಆರೋಪಿ, ಪರಿಶೀಲನೆ ಹಾಗೂ ಇತರೆ ಹೆಸರಿನಲ್ಲಿ ಹಂತ ಹಂತವಾಗಿ ₹ 10.50 ಲಕ್ಷ ಪಡೆದುಕೊಂಡಿದ್ದ. ಇದಾದ ಕೆಲ ಗಂಟೆಗಳ ನಂತರ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ವಂಚನೆ ಎಂಬುದು ತಿಳಿಯುತ್ತಿದ್ದಂತೆ ಉದ್ಯಮಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.