ADVERTISEMENT

ಮನೆ ಬಳಿಯ ಮರದ ಮಾಹಿತಿ ಪಡೆಯಿರಿ: ಮರಗಣತಿ ಮಾಹಿತಿ ನಾಗರಿಕರಿಗೆ ಲಭ್ಯ

ಬಿಬಿಎಂಪಿಯ ಮರಗಣತಿ ಮಾಹಿತಿ ಪರೀಕ್ಷಾರ್ಥವಾಗಿ ನಾಗರಿಕರಿಗೆ ಲಭ್ಯ

ಆರ್. ಮಂಜುನಾಥ್
Published 21 ನವೆಂಬರ್ 2024, 21:52 IST
Last Updated 21 ನವೆಂಬರ್ 2024, 21:52 IST
ಬಿಬಿಎಂಪಿ ನಡೆಸುತ್ತಿರುವ ಮರ ಗಣತಿಯ ನಕ್ಷೆ
ಬಿಬಿಎಂಪಿ ನಡೆಸುತ್ತಿರುವ ಮರ ಗಣತಿಯ ನಕ್ಷೆ   

ಬೆಂಗಳೂರು: ನಗರದಲ್ಲಿರುವ ಮರದ ವಯಸ್ಸು, ಅದರ ಜಾತಿ, ಹೆಸರು– ಜೈವಿಕ ಹೆಸರು, ಅದರ ಸುತ್ತಳತೆ ಸೇರಿದಂತೆ ಮರದ ಮಾಹಿತಿಗಳನ್ನು ನಾಗರಿಕರು ಅರಿತುಕೊಳ್ಳಬಹುದು. ಅಷ್ಟೇ ಅಲ್ಲ, ಅದರಲ್ಲಿ ತಪ್ಪಿದ್ದರೆ, ಸರಿಪಡಿಸಲು ಬಿಬಿಎಂಪಿಗೆ ಸಲಹೆಯನ್ನೂ ನೀಡಬಹುದು.

ನಗರದಲ್ಲಿ ಪ್ರಥಮ ಬಾರಿಗೆ ಬಿಬಿಎಂಪಿ ಮರಗಳ ಗಣತಿ ನಡೆಸುತ್ತಿದ್ದು, ಮರ–ಗಿಡಗಳ ಚಿತ್ರ, ಪ್ರಭೇದ ಸಹಿತ ಸಮಗ್ರ ಮಾಹಿತಿ ಆ್ಯಪ್‌ನಲ್ಲಿ ದಾಖಲಿಸುತ್ತಿದೆ. ಇದೀಗ ಸುಮಾರು 3.25 ಲಕ್ಷ ಗಿಡ–ಮರಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿದೆ. ಪ್ರತಿ ದಿನವೂ ಸುಮಾರು 20 ಸಾವಿರ ಗಿಡ–ಮರಗಳ ಮಾಹಿತಿ ಸೇರ್ಪಡೆಯಾಗುತ್ತಿದೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಸಿದ್ಧಪಡಿಸಿರುವ ಮೊಬೈಲ್‌ ಆ್ಯಪ್‌ನಲ್ಲಿ ಮರಗಣತಿ ಕಾರ್ಯ ನಡೆಯುತ್ತಿದೆ. ಈವರೆಗಿನ ಗಿಡ–ಮರಗಳ ಮಾಹಿತಿಯನ್ನು https://kgis.ksrsac.in/test/ನಲ್ಲಿ ನಾಗರಿಕರು ಪರೀಕ್ಷಿಕೊಳ್ಳಲು ಬಿಬಿಎಂಪಿ ಅನುವು ಮಾಡಿಕೊಟ್ಟಿದೆ.

ADVERTISEMENT

ಮರದ ಚಿತ್ರದೊಂದಿಗೆ ಅದರ ಮಾಹಿತಿಯನ್ನು ವಾರ್ಡ್‌ವಾರು ಪಡೆಯಬಹುದು. ವಿಸ್ತಾರವಾದ ನಕ್ಷೆಯಲ್ಲಿ ವಾರ್ಡ್‌ ಆಯ್ಕೆ ಮಾಡಿಕೊಂಡು, ಅಡ್ಡ ಅಥವಾ ಮುಖ್ಯ ರಸ್ತೆಯಲ್ಲಿ ಗುರುತಿಸಲಾಗಿರುವ ಮರದ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ಅದರ ಮಾಹಿತಿ ಲಭ್ಯವಾಗುತ್ತದೆ. ಪ್ರತಿಯೊಂದು ಮರಕ್ಕೂ ವಾರ್ಡ್‌ ಹೆಸರು ಹಾಗೂ ಸಂಖ್ಯೆಗಳನ್ನು ನೀಡಲಾಗಿದೆ.

ಎಂಟು ವಿಭಾಗ: ‘ನಗರದ ಭೌಗೋಳಿಕ ವಿಸ್ತೀರ್ಣ 840 ಚದರ ಕಿಲೋಮೀಟರ್‌ ಇದೆ. ತಲಾ 100 ಚದರ ಕಿಲೋಮೀಟರ್‌ನ ಎಂಟು ವಿಭಾಗ ಮಾಡಿಕೊಳ್ಳಲಾಗಿದೆ. ಈ ವಿಭಾಗಗಳನ್ನು ಘಟಕ ಎಂದು ಪರಿಗಣಿಸಿ, ಎಂಟು ಗುತ್ತಿಗೆದಾರರನ್ನು ನೇಮಿಸಲಾಗಿದೆ.  ಅವರು, ಕೆಎಸ್‌ಆರ್‌ಎಸ್‌ಎಸಿ ಆ್ಯಪ್‌ನಲ್ಲಿ ಮಾಹಿತಿ ನಮೂದಿಸುತ್ತಿದ್ದಾರೆ. ಪ್ರತಿ ದಿನದ ಅಂತ್ಯದಲ್ಲಿ ಎಲ್ಲ ವಿಭಾಗಗಳ ಮಾಹಿತಿ ಅಪ್‌ಲೋಡ್‌ ಮಾಡಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ ಸ್ವಾಮಿ ತಿಳಿಸಿದರು.

ನಿಧಾನಗತಿ: ‘ಯಲಹಂಕ ಹಾಗೂ ದಾಸರಹಳ್ಳಿ ವಲಯದಲ್ಲಿ ಮರ ಗಣತಿಗೆ ಗುತ್ತಿಗೆ ಪಡೆದಿರುವ ರಾಸ್ತಾ ಸಂಸ್ಥೆ, ಕಾರ್ಯವನ್ನು ವಿಳಂಬ ಮಾಡುತ್ತಿದೆ. ಅವರಿಗೆ ಗುತ್ತಿಗೆ ರದ್ದು ಮಾಡುವ ನೋಟಿಸ್‌ ಜಾರಿ ಮಾಡಲಾಗಿದ್ದು, ಕೂಡಲೇ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸದಿದ್ದರೆ ಗುತ್ತಿಗೆ ರದ್ದು ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯ ಆಯುಕ್ತರಿಗೂ ಮಾಹಿತಿ ನೀಡಲಾಗಿದ್ದು, ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಸ್ವಾಮಿ ಹೇಳಿದರು.

‘ರಾಜರಾಜೇಶ್ವರಿನಗರ, ಪಶ್ಚಿಮ, ಪೂರ್ವ, ದಕ್ಷಿಣ ವಲಯಗಳಲ್ಲೂ ರಾಸ್ತಾ ಸಂಸ್ಥೆಯೇ ಮರ ಗಣತಿಯ ಗುತ್ತಿಗೆ ಪಡೆದಿದೆ. ಅಲ್ಲಿ ಕೆಲಸ ವೇಗವಾಗಿ ನಡೆಯುತ್ತಿದೆ. ಆದರೆ ಎರಡು ವಲಯದಲ್ಲಿ ಅವರು ನಿಧಾನವಾಗಿದ್ದಾರೆ. ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯದಲ್ಲಿ ಜೀವನ್‌ ಸಂಸ್ಥೆಯವರು ಗುತ್ತಿಗೆ ಪಡೆದು, ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮರ ಗಣತಿ ಸಮೀಕ್ಷೆ ಕಾರ್ಯ ಅತಿವೇಗದಲ್ಲಿ ನಡೆಯುತ್ತಿದ್ದು ದಿನಕ್ಕೆ 25 ಸಾವಿರದಿಂದ 30 ಸಾವಿರ ಮರಗಳ ಮಾಹಿತಿ ಅಪ್‌ಲೋಡ್‌ ಆಗುತ್ತಿದೆ. ಹೀಗಾಗಿ, ಇನ್ನೆರೆಡು ಅಥವಾ ಮೂರು ತಿಂಗಳಲ್ಲಿ ಮರ ಗಣತಿ ಪೂರ್ಣಗೊಳ್ಳಲಿದೆ’ ಎಂದರು.

ಮರ ಗಣತಿಯ ಆ್ಯಪ್‌ನಲ್ಲಿರುವ ಮರದ ಮಾಹಿತಿಯ ಮಾದರಿ

‘ಕನ್ನಡದಲ್ಲೂ ಲಭ್ಯ’

‘ಮರ ಗಣತಿಯಲ್ಲಿ ಮರಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪರೀಕ್ಷಾರ್ಥವಾಗಿ ಪ್ರಕಟಿಸಲಾಗಿದೆ. ನಾಗರಿಕರು ತಮ್ಮ ವ್ಯಾಪ್ತಿಯಲ್ಲಿರುವ ಮರಗಳ ಮಾಹಿತಿಯನ್ನು ವೀಕ್ಷಿಸಬಹುದು. ಯಾವುದಾದರೂ ಮಾಹಿತಿ ತಪ್ಪಿದ್ದರೆ ಅದರ ಬಗ್ಗೆ ಪ್ರತಿಕ್ರಿಯಿಸಬಹುದು’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ತಿಳಿಸಿದರು. ‘ವೆಬ್‌ಸೈಟ್‌ ಪ್ರಾಯೋಗಿಕ ಹಂತದಲ್ಲಿದ್ದು ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಅದ್ದರಿಂದ ನಾಗರಿಕರು ಸಲಹೆಗಳನ್ನು ಕಳುಹಿಸಬಹುದು. ಇದೀಗ ಇಂಗ್ಲಿಷ್‌ನಲ್ಲಿ ಮಾತ್ರ ಮಾಹಿತಿ ಲಭ್ಯವಿದೆ. ಅಂತಿಮವಾಗಿ ವೆಬ್‌ಸೈಟ್‌ ಅಧಿಕೃತವಾಗಿ ಅನಾವರಣವಾಗುವ ಸಂದರ್ಭದಲ್ಲಿ ಕನ್ನಡದಲ್ಲೂ ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.