ಕೆಂಗೇರಿ: ತ್ಯಾಜ್ಯ ಹಾಗೂ ರಾಸಾಯನಿಕ ವಸ್ತುಗಳು ಭೀಮನಕುಪ್ಪೆ ಕೆರೆ ಸೇರುತ್ತಿದ್ದು, ಕೆರೆಯೊಡಲು ಕಲುಷಿತಗೊಳ್ಳುವ ಆತಂಕ ಎದುರಾಗಿದೆ.
ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಾಳಿಗೊಂಡನಹಳ್ಳಿ ಗ್ರಾಮದ ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸಂಗ್ರಹಣೆ ಮಾಡಲಾಗಿದೆ. ಗ್ರಾಮದ ಸರ್ವೇ ನಂ. 26ರಲ್ಲಿರುವ ಈ ಜಮೀನಿನಲ್ಲಿ ಸುತ್ತಮುತ್ತಲ ಪ್ರದೇಶದ ಕೈಗಾರಿಕಾ ತ್ಯಾಜ್ಯ ಸುರಿಯಲಾಗುತ್ತಿದೆ. ಜಮೀನಿನ ಮಾಲೀಕರು ಹಣ ಪಡೆದು ಕಸ ಸುರಿಯಲು ಅವಕಾಶ ನೀಡಿದ್ದು, ಮಧ್ಯರಾತ್ರಿಯಲ್ಲಿ ಟಿಪ್ಪರ್‌ಗಳಲ್ಲಿ ತ್ಯಾಜ್ಯವನ್ನು ತರಲಾಗುತ್ತಿದೆ. ಹಲವು ದಿನಗಳಿಂದ ಇದು ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಗ್ರಹಗೊಂಡಿರುವ ತ್ಯಾಜ್ಯ ಹಾಗೂ ಅದರಲ್ಲಿನ ರಾಸಾಯನಿಕಗಳು ಭೀಮನಕುಪ್ಪೆ ಕೆರೆ ಒಡಲು ಸೇರುತ್ತಿದೆ. ಕೆರೆ ನೀರು ದುರ್ವಾಸನೆ ಬೀರುತ್ತಿದೆ.
ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಪ್ರಭು ಮಾತನಾಡಿ, 'ಜಮೀನಿನ ಮಾಲೀಕರು ಅನಧಿಕೃತವಾಗಿ ತ್ಯಾಜ್ಯ ಸಂಗ್ರಹಣೆಗೆ ಅವಕಾಶ ಕಲ್ಪಿಸಿದ್ದಾರೆ. ತ್ಯಾಜ್ಯದ ದುರ್ವಾಸನೆಯಿಂದ ಸುತ್ತಮುತ್ತಲ ವಾತಾವರಣ ಹದಗೆಟ್ಟಿದೆ. ಕೆರೆ ನೀರು ಮಲಿನಗೊಂಡಿದೆ. ಅಂತರ್ಜಲವೂ ಕಲುಷಿತಗೊಳ್ಳುವ ಆತಂಕ ಎದುರಾಗಿದೆ‘ ಎಂದರು.
ತಪ್ಪಿತಸ್ಥರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಿಸರ ನಿಯಂತ್ರಣ ಮಂಡಳಿಗೂ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದರು. ಕುಂಬಳಗೋಡು ಠಾಣಾಧಿಕಾರಿ ಮಂಜುನಾಥ್ ಹೂಗಾರ್, ಪಂಚಾಯಿತಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.