ADVERTISEMENT

ಪರಿಶ್ರಮದ ಕಲಿಕೆಯಿಂದ ಬದುಕು ಹಸನ: ಸಾಹಿತಿ ಹಂ.ಪ. ನಾಗರಾಜಯ್ಯ

*ತಾರಾನಾಥ್‌ಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:36 IST
Last Updated 15 ಜೂನ್ 2024, 15:36 IST
<div class="paragraphs"><p>ಕಾರ್ಯಕ್ರಮದಲ್ಲಿ ಎನ್.ಎಸ್. ತಾರಾನಾಥ್ ಮತ್ತು&nbsp;ಸ್ವರ್ಣಗೌರಿ ತಾರಾನಾಥ್ ದಂಪತಿಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ರುದ್ರೇಶ್ ಅದರಂಗಿ, ಎಚ್. ಶಶಿಕಲಾ,  ಹಂ.ಪ.ನಾಗರಾಜಯ್ಯ, ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಕಾರ್ಯದರ್ಶಿ ಎಸ್.ಎಲ್.ಶ್ರೀನಿವಾಸ ಮೂರ್ತಿ  ಪಾಲ್ಗೊಂಡಿದ್ದರು </p></div>

ಕಾರ್ಯಕ್ರಮದಲ್ಲಿ ಎನ್.ಎಸ್. ತಾರಾನಾಥ್ ಮತ್ತು ಸ್ವರ್ಣಗೌರಿ ತಾರಾನಾಥ್ ದಂಪತಿಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ರುದ್ರೇಶ್ ಅದರಂಗಿ, ಎಚ್. ಶಶಿಕಲಾ, ಹಂ.ಪ.ನಾಗರಾಜಯ್ಯ, ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಕಾರ್ಯದರ್ಶಿ ಎಸ್.ಎಲ್.ಶ್ರೀನಿವಾಸ ಮೂರ್ತಿ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಠಿಣ ಪರಿಶ್ರಮ, ಗುರಿ ಇದ್ದಾಗ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ’ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ತಿಳಿಸಿದರು.  

ADVERTISEMENT

ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ತಾರಾನಾಥ್‌ ಅವರಿಗೆ 2024ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಮತ್ತು ಸರ್ಕಾರಿ ಕಲಾ ಕಾಲೇಜು ಜಂಟಿಯಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದವು.  

‘ಪದವಿ, ಸ್ನಾತಕೋತ್ತರ ಪದವಿ ಅವಧಿಯಲ್ಲಿ ಕಷ್ಟಪಟ್ಟು ಓದಿದರೆ ಮುಂದಿನ 40 ವರ್ಷ ಬದುಕು ಕಟ್ಟಿಕೊಳ್ಳಬಹುದು. ಈ ಅವಧಿಯಲ್ಲಿ ಮನಸ್ಸು ಬೇರೆಡೆಗೆ ಹರಿದಾಡಿದಲ್ಲಿ ಜೀವನ ಪೂರ್ತಿ ಕಷ್ಟಪಡಬೇಕಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ತಾಳ್ಮೆ ಅತೀ ಮುಖ್ಯ. ಓದು ಹಾಗೂ ಕಲಿಕೆಗೆ ಮುಕ್ತಾಯ ಎನ್ನುವುದಿಲ್ಲ. ಈಗ ‍ಪ್ರಾರಂಭವೆಂದು ಹೆಜ್ಜೆ ಇಡಬೇಕು. ವ್ಯಾಕರಣ, ಛಂದಸ್ಸು, ಶಾಸನಶಾಸ್ತ್ರ ಹಾಗೂ ತೌಲನಿಕ ಅಧ್ಯಯನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತಾರಾನಾಥ್, ಓದುಗರಿಗೆ ಬೇಕಾದ ಸಿದ್ಧತೆಯ ಪಾಠಗಳನ್ನು ಮಾಡಿದರು. ಹೊಸ ತಲೆಮಾರಿಗೆ ಬೇಕಾದ ವಾತಾವರಣ ನಿರ್ಮಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದವರಲ್ಲಿ ಇವರೂ ಒಬ್ಬರು’ ಎಂದರು. 

ಅಭಿನಂದನಾ ಭಾಷಣ ಮಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಎಚ್.ಶಶಿಕಲಾ, ‘ಕನ್ನಡ ಭಾಷೆಯು ಬೇರೆ ಭಾಷೆಗಳಿಂದ ಪುಷ್ಠಿ ಪಡೆದಿದೆ. ಕನ್ನಡ ಭಾಷೆ ಬದಲಾಗುತ್ತಿದೆ. ಭಾಷೆ ಬದಲಾವಣೆಯ ಅಗತ್ಯವನ್ನು ಗುರುತಿಸಬೇಕು. ಸಂಶೋಧನೆಗಳು ವಾಸ್ತವದ ನೆಲೆಗಟ್ಟಿನಿಂದ ಕೂಡಿರಬೇಕು’ ಎಂದರು.

ಎನ್.ಎಸ್.ತಾರಾನಾಥ್‌ ಅವರು, ‘ಸಂಶೋಧಕ ಚಿದಾನಂದ ಮೂರ್ತಿ ಅವರು ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುತ್ತಿದ್ದರು. ಕನ್ನಡದ ಜತೆಗೆ ಸಂಸ್ಕೃತ ಹಾಗೂ ಸಂಸ್ಕೃತಿಯ ಶೋಧಕರಾಗಿ ಗುರುತಿಸಿಕೊಂಡರು. ಅವರ ಸಂಶೋಧನೆಗೆ ಅನೇಕ ಆಯಾಮಗಳಿದ್ದವು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.