ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಮಲ್ಲಿಗೆ ಕಾರಿಡಾರ್ ಕಾಮಗಾರಿಯನ್ನು ಮಂಗಳವಾರ ಖುದ್ದಾಗಿ ಪರಿಶೀಲಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್‌ಆರ್‌ಪಿ ಕಾಮಗಾರಿ ನಡೆಯುತ್ತಿರುವ ಕನಕನಗರ ಲೆವೆಲ್ ಕ್ರಾಸಿಂಗ್‌ನ ಕಾಮಗಾರಿ ವೀಕ್ಷಿಸಿದ ಅವರು, ‘ಕಾಮಗಾರಿ ವಿಳಂಬ ಆಗುವುದಕ್ಕೆ ಕಾರಣವೇನು? ಏನಾದರೂ ಸಮಸ್ಯೆ ಆಗುತ್ತಿದೆಯೇ’ ಎಂದು ಗುತ್ತಿಗೆದಾರರಾಗಿರುವ ಎಲ್ ಆ್ಯಂಡ್ ಟಿ ಕಂಪನಿಯ ಎಂಜಿನಿಯರ್‌ಗಳು ಹಾಗೂ ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದ (ಕೆ- ರೈಡ್) ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳಿಂದ ಸರಿಯಾದ ಉತ್ತರ ಬರಲಿಲ್ಲ. ‘ನಾವು ಇಲ್ಲಿಗೆ ಬಂದಿರುವುದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು. ಆದರೆ, ನೀವು ಸಮರ್ಪಕವಾಗಿ ಉತ್ತರಿಸದಿದ್ದರೆ ಹೇಗೆ? ಸಮಸ್ಯೆ ಬಗೆ ಹರಿಸುವುದಾದರೂ ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಮಂಜುಳಾ, ‘ರೈಲ್ವೆ ಇಲಾಖೆಯ ಜಮೀನು ಒತ್ತುವರಿ ಆಗಿರುವುದರಿಂದ ಮಲ್ಲಿಗೆ ಮಾರ್ಗದ ಕಾಮಗಾರಿ ವಿಳಂಬವಾಗಿದೆ. ಒತ್ತುವರಿಗೆ ತೆರವಿಗೆ ಕ್ರಮ ಕೈಗೊಳ್ಳುವಂತೆ ನೈಋತ್ಯ ರೈಲ್ವೆಗೆ ತಿಳಿಸಲಾಗಿದೆ’ ಎಂದು ವಿವರಿಸಿದರು.
‘ರೈಲ್ವೆ ಇಲಾಖೆಯಿಂದ ಕೆ-ರೈಡ್‌ಗೆ ಜಮೀನು ಹಸ್ತಾಂತರಿಸುವ ಸಂದರ್ಭದಲ್ಲಿ ಅತಿಕ್ರಮಣ ತೆರವುಗೊಳಿಸಿರಲಿಲ್ಲ. ಈಗ ‘ಮಲ್ಲಿಗೆ ಮಾರ್ಗ’ದ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 25 ಕಿ.ಮೀ., ವ್ಯಾಪ್ತಿಯಲ್ಲಿ 62 ಸ್ಥಳಗಳಲ್ಲಿ ಅತಿಕ್ರಮಣ ಆಗಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಒತ್ತುವರಿ ತೆರವುಗೊಳಿಸಿ ಜಮೀನು ಹಸ್ತಾಂತರಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕೋರಲಾಗಿದೆ’ ಎಂದರು.
ಜಲಮಂಡಳಿಯಿಂದ 32 ಕಡೆ ಪೈಪ್‌ಲೈನ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ (ಕೆಪಿಟಿಸಿಎಲ್) ಆರು ಸ್ಥಳಗಳಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರ ಮಾಡಬೇಕಾಗಿದೆ. ಬಿಎಸ್‌ಆರ್‌ಪಿ ಕಾಮಗಾರಿಗಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಸುತ್ತಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಚುರುಕಾಗಿ ಕೆಲಸ ಮಾಡುತ್ತಿದೆ. ದೇವಸ್ಥಾನ, ಮನೆ, ಖಾಸಗಿ ಕಟ್ಟಡ, ನಿವೇಶನಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಮಲ್ಲಿಗೆ ಮಾರ್ಗದ ಕಾಮಗಾರಿಗೆ ಅಗತ್ಯವಿರುವ ಜಮೀನುಗಳ ಸ್ವಾಧೀನ ಪ್ರಕ್ರಿಯೆಯನ್ನು 2025ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.
‘2026ರ ಸೆಪ್ಟೆಂಬರ್ ವೇಳೆಗೆ ಮಲ್ಲಿಗೆ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.