ಬೆಂಗಳೂರು: ನಗರದ ಚಿಕ್ಕಬಾಣವರ ಕೆರೆಯ ಸಮೀಪ ಇರುವ ಕಸದ ರಾಶಿಯನ್ನು ಶೀಘ್ರವೇ ತೆರವು ಮಾಡಿ, ಒಂದು ವಾರದೊಳಗೆ ವರದಿ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಲೋಕಾಯುಕ್ತರು ಶುಕ್ರವಾರ ಗಡುವು ನೀಡಿದರು.
ಘನ ತ್ಯಾಜ್ಯ ವಿಲೇವಾರಿಯಲ್ಲಿ ಕರ್ತವ್ಯಲೋಪ ಮತ್ತು ದುರಾಡಳಿತದ ಆರೋಪದಡಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅದರ ಭಾಗವಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಮತ್ತು ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹಾಗೂ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನಗರದ ಹಲವೆಡೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಕಬಾಣವರ ಕೆರೆಯ ಸುತ್ತಮುತ್ತ ಬಿದ್ದಿದ್ದ ಸುಮಾರು 300 ಟನ್ ಕಸವನ್ನು ತೆರವು ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸುವ ಸಲುವಾಗಿ ಮೂವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೆರೆಯ ಸುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದ ಕಸದ ರಾಶಿ ಇದ್ದುದ್ದನ್ನು ಕಂಡ ಲೋಕಾಯುಕ್ತರು ಸಂಬಂಧಿತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು. ‘ಇದು ನಾಲ್ಕೈದು ದಿನಗಳ ಹಿಂದೆ ಬಿದ್ದಿರುವ ಕಸವಷ್ಟೇ’ ಎಂದು ಅಧಿಕಾರಿಗಳು ಉತ್ತರಿಸಿದಾಗ, ಲೋಕಾಯುಕ್ತರು ಸ್ಥಳೀಯರಲ್ಲಿ ಆ ಬಗ್ಗೆ ವಿಚಾರಿಸಿದರು.
‘ಕಸ ಹಲವು ದಿನಗಳಿಂದ ಇಲ್ಲೇ ಬಿದ್ದಿದೆ’ ಎಂದು ಸ್ಥಳೀಯರು ಹೇಳಿದರೆ, ‘ಒಂದು ವರ್ಷದಿಂದಲೂ ಕಸ ಹೀಗೆಯೇ ಬಿದ್ದಿದೆ’ ಎಂದು ಶಾಲಾ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ನಂತರ ಲೋಕಯುಕ್ತರು, ‘ಒಂದು ವಾರದ ಒಳಗೆ ಕಸವನ್ನು ತೆರವು ಮಾಡಿ ವರದಿ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಮ್ಮಗೊಂಡನಹಳ್ಳಿ, ಅಬ್ಬಿಗೆರೆಯಲ್ಲಿ ಕಸದ ವಿಲೇವಾರಿ ಸಂಬಂಧ ದೂರಿನಲ್ಲಿ ಉಲ್ಲೇಖಿಸಲಾಗಿದ್ದ ಸ್ಥಳಗಳಿಗೆ, ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಲ ಪ್ರದೇಶಗಳಿಗೂ ಲೋಕಾಯುಕ್ತರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕೆರೆ ಅಭಿವೃದ್ಧಿ ಕಾಮಗಾರಿ ವಿವರಕ್ಕೆ ಸೂಚನೆ
ಚಿಕ್ಕಬಾಣಾವರ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧವೂ ಲೋಕಾಯುಕ್ತರು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕೆರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವು. ಕೆರೆಯ ಹೂಳು ತೆರವು ಕೆರೆದಂಡೆಯಲ್ಲಿ ಉದ್ಯಾನ ಮತ್ತು ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಲೋಕಾಯುಕ್ತರು ಅಧಿಕಾರಿಗಳಿಂದ ಆ ಬಗ್ಗೆ ಮಾಹಿತಿ ಪಡೆದುಕೊಂಡರು. ಒತ್ತುವರಿ ತೆರವು ಕೆರೆ ಅಭಿವೃದ್ಧಿಯ ನೀಲನಕ್ಷೆ ಕಾಮಗಾರಿಗೆ ಬಳಸುತ್ತಿರುವ ಜೆಸಿಬಿ ಮತ್ತು ಟಿಪ್ಪರ್‌ಗಳ ಸಂಖ್ಯೆಯ ಪುರಸಭೆ ಮತ್ತು ಬಿಡಿಎ ವತಿಯಿಂದ ಮಂಜೂರಾಗಿರುವ ಮೊತ್ತದ ಬಗ್ಗೆ ವರದಿ ನೀಡಿ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.