ADVERTISEMENT

ವಾಹನದಿಂದ ಸೋರುತ್ತಿದ್ದ ರಕ್ತ; ಆತಂಕ

* ಹಿಂದೂಪುರದಿಂದ ನಗರಕ್ಕೆ ಗೋಮಾಂಸ ಸಾಗಣೆ * ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:27 IST
Last Updated 1 ಸೆಪ್ಟೆಂಬರ್ 2019, 19:27 IST

ಬೆಂಗಳೂರು: ಚಿಕ್ಕಜಾಲ ಸಮೀಪದ ಮೀನುಕುಂಟೆ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ವಾಹನದಿಂದ ರಕ್ತ ಸೋರಿದ್ದರಿಂದ, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಸ್ತೆಯಲ್ಲೆಲ್ಲ ಬಿದ್ದಿದ್ದ ರಕ್ತ ಕಂಡು ಗಾಬರಿಗೊಂಡಿದ್ದ ಜನ, ಚಿಕ್ಕಜಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಪೊಲೀಸರು, ವಾಹನದಲ್ಲಿ ಪರಿಶೀಲನೆ ನಡೆಸಿದಾಗ ಆಗತಾನೇ ಕತ್ತರಿಸಿದ್ದ ಗೋಮಾಂಸ ಸಾಗಿಸುತ್ತಿದ್ದ ಸಂಗತಿ ತಿಳಿಯಿತು.

‘ಇದೇ 30ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಏಸ್ ವಾಹನ ಕೆಟ್ಟು ನಿಂತಿತ್ತು. ಅದರ ಚಾಲಕ ಅಲ್ಲಿಯೇ ಇದ್ದ. ಆ ವಾಹನದಿಂದ ರಕ್ತ ಸೋರುತ್ತಿತ್ತು. ಅದು ರಸ್ತೆಯಲ್ಲೆಲ್ಲ ಚೆಲ್ಲಿತ್ತು. ಅದನ್ನು ನೋಡಿ ಜನ ಗಾಬರಿಗೊಂಡಿದ್ದರು’ ಎಂದು ಚಿಕ್ಕಜಾಲ ಪೊಲೀಸರು ಹೇಳಿದರು.

ADVERTISEMENT

‘ಗೋಮಾಂಸದ ರಕ್ತ ಎಂಬುದು ಗೊತ್ತಾಗುತ್ತಿದ್ದಂತೆ, ಚಾಲಕ ಮೆಹಬೂಬ್ ಪಾಷಾನನ್ನು ವಿಚಾರಣೆಗೆ ಒಳಪಡಿಸಲಾಯಿತು. ‘ನಿತ್ಯವೂ ಹಿಂದೂಪುರದಿಂದ ಬೆಂಗಳೂರಿನ ಟ್ಯಾನಿ ರಸ್ತೆಗೆ ಗೋಮಾಂಸ ಸಾಗಿಸುತ್ತೇನೆ’ ಎಂಬುದಾಗಿ ಆತ ಹೇಳಿಕೆ ನೀಡಿದ’ ಎಂದು ವಿವರಿಸಿದರು.

ಚಾಲಕನ ವಿರುದ್ಧ ಎಫ್‌ಐಆರ್ : ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ,ಗೋಹತ್ಯೆ ನಿಷೇಧ ಕಾಯ್ದೆ ಅಡಿ ಚಾಲಕ ಮೆಹಬೂಬ್ ಪಾಷ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

’ಮೆಹಬೂಬ್ ಪಾಷ, ಗೋಮಾಂಸ ಸಾಗಣೆ ಜವಾಬ್ದಾರಿ ವಹಿಸಿಕೊಂಡಿದ್ದ. ಹಿಂದೂಪುರದಲ್ಲಿದ್ದ ವ್ಯಾಪಾರಿಯೊಬ್ಬರು, ಗೋಹತ್ಯೆ ಮಾಡಿ ಮಾಂಸವನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದ. ಟ್ಯಾನರಿ ರಸ್ತೆಯ ವ್ಯಾಪಾರಿ ಆ ಗೋಮಾಂಸವನ್ನು ಗ್ರಾಹಕರಿಗೆ ಮಾರುತ್ತಿದ್ದ. ಇದಕ್ಕೆಲ್ಲ ಪರವಾನಗಿ ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

‘ವಿಚಾರಣೆ ವೇಳೆ ಮೆಹಬೂಬ್ ಪಾಷ, ಹಲವರ ಹೆಸರು ಹೇಳಿದ್ದಾನೆ. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.