ಬೆಂಗಳೂರು: ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಛಾಯಾಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವ ಜೊತೆಗೆ ಬೇರೆಯವರಿಗೂ ರವಾನೆ ಮಾಡುತ್ತಿದ್ದ ಅಸ್ಸಾಂನ ಸುನೈ ಗ್ರಾಮದ ವ್ಯಕ್ತಿಯನ್ನು ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೂರ್ ಇಸ್ಲಾಂ ಚೌದ್ರಿ(37) ಬಂಧಿತ ಆರೋಪಿ.
ಆರೋಪಿಯಿಂದ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗ ಸೆನ್ ಠಾಣೆ ಪೊಲೀಸರು ಹೇಳಿದರು.
‘ನೂರ್ ಇಸ್ಲಾ ಚೌದ್ರಿ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಫ್ರೇಜರ್ ಟೌನ್‌ನಲ್ಲಿ ನೆಲೆಸಿದ್ದ. ಈತ ನಗರದ ಹೈನ್‌ಸ್ ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಅಶ್ಲೀಲ ವಿಡಿಯೊ ವೀಕ್ಷಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಸಿಆರ್‌ಬಿ ಪೋರ್ಟಲ್ ವಿಭಾಗವು ರಾಜ್ಯದ ಸಿಐಡಿ ಸೈಬರ್ ಅಧಿಕಾರಿಗಳಿಗೆ ಸೈಬರ್ ಟಿಪ್‌ಲೈನ್ ನಂಬರ್ ಸಹಿತ ಮಾಹಿತಿ ನೀಡಿತ್ತು. ಇಲ್ಲಿನ ಸಿಐಡಿ ಅಧಿಕಾರಿಗಳು ಆರೋಪಿ ಮೊಬೈಲ್‌ನ ಐಪಿ ವಿಳಾಸ ಮತ್ತು ಇತರೆ ಮಾಹಿತಿ ಸಂಗ್ರಹಿಸಿ ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರಿಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.