ADVERTISEMENT

ಮಕ್ಕಳ ಮಾರಾಟ: ಗಾರ್ಮೆಂಟ್ಸ್‌ ನೌಕರಳೀಗ ಸಿರಿವಂತೆ!

ಕರ್ನಾಟಕ, ತಮಿಳುನಾಡಿನಲ್ಲಿ ಜಾಲ ಸಕ್ರಿಯ: 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 21:29 IST
Last Updated 30 ನವೆಂಬರ್ 2023, 21:29 IST
ಮಹಾಲಕ್ಷ್ಮಿ
ಮಹಾಲಕ್ಷ್ಮಿ   

ಬೆಂಗಳೂರು: ಮಕ್ಕಳ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಆರೋಪಿಗಳು ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಹಾಲಕ್ಷ್ಮಿ, ನಕಲಿ ವೈದ್ಯ ಕೆವಿನ್‌, ಆರ್‌.ಟಿ.ನಗರದ ನಿವಾಸಿ ರಮ್ಯಾ, ತಮಿಳುನಾಡಿನ ಈರೋಡ್‌ ಕಣ್ಣನ್ ರಾಮಸ್ವಾಮಿ, ಆತನ ಸಹಚರರಾದ ಗೋಮತಿ, ಹೇಮಲತಾ, ರಾಧಾ, ಸುಹಾಸಿನಿ, ಶರಣ್ಯ, ಮುರುಗೇಶ್ವರಿ ಅವರನ್ನು ಕಸ್ಟಡಿಗೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಗೆ ಮಕ್ಕಳನ್ನು ಕಳ್ಳಸಾಗಣೆ ಮಾಡಿ ಮಾರಾಟ ನಡೆಸಿರುವುದು ಬಯಲಾಗಿದೆ.

ADVERTISEMENT

‘ಕರ್ನಾಟಕದಲ್ಲಿ ಆರು ವರ್ಷಗಳಲ್ಲಿ 60 ಮಕ್ಕಳನ್ನು ಮಾರಾಟ ಮಾಡಿದ್ದಾರೆ. ಅದರಲ್ಲಿ 10 ಮಕ್ಕಳನ್ನು ಖರೀದಿಸಿದ ದಂಪತಿಗಳ ವಿಳಾಸ ಪತ್ತೆಯಾಗಿದೆ. ಉಳಿದ ಮಕ್ಕಳನ್ನು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ತಮಿಳುನಾಡಿನ ನಾಲ್ಕು ಆಸ್ಪತ್ರೆಗಳ ವೈದ್ಯರ ಸಹಕಾರದಿಂದ ಅದೇ ರಾಜ್ಯದಲ್ಲಿ 190 ಮಕ್ಕಳನ್ನು ಮಾರಾಟ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಮಹಾಲಕ್ಷ್ಮಿಯೇ ಸೂತ್ರಧಾರಿ: ‘ಬೆಂಗಳೂರಿನ ಮಹಾಲಕ್ಷ್ಮಿಯೇ ಈ ಜಾಲದ ಪ್ರಮುಖ ಆರೋಪಿ. ಈಕೆಯೇ ಇಡೀ ಜಾಲವನ್ನು ನಿಯಂತ್ರಿಸುತ್ತಿದ್ದಳು. ಮಕ್ಕಳು ಬೇಕಾದ ದಂಪತಿಗಳನ್ನು ಪತ್ತೆಹಚ್ಚುವುದು, ಮಕ್ಕಳನ್ನು ಮಾರಾಟ ಮಾಡಿದ ಮೇಲೆ ಹಣ ಪಡೆಯುವುದು ಸೇರಿದಂತೆ ಹಲವು ಕೃತ್ಯಗಳನ್ನು ಮಹಾಲಕ್ಷ್ಮಿ ನಿಭಾಯಿಸುತ್ತಿದ್ದಳು. ಮಕ್ಕಳ ಮಾರಾಟದ ದರವನ್ನು ಈಕೆಯೇ ಅಂತಿಮಗೊಳಿಸುತ್ತಿದ್ದಳು. ವಾಟ್ಸ್‌ಆ್ಯಪ್‌ ಮೂಲಕ ಮಗುವಿನ ಫೋಟೊವನ್ನು ದಂಪತಿಗೆ ಕಳುಹಿಸುತ್ತಿದ್ದಳು. ಮಗುವಿನ ಬಣ್ಣ, ಲಿಂಗ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತಿತ್ತು’

‘ಗಂಡು ಮಗುವಿಗೆ ₹ 8 ಲಕ್ಷದಿಂದ ₹10 ಲಕ್ಷ, ಹೆಣ್ಣು ಮಗುವಿಗೆ ₹ 4 ಲಕ್ಷದಿಂದ ₹5 ಲಕ್ಷವನ್ನು ಪಡೆದು ಮಾರಾಟ ಮಾಡಿದ್ದಾರೆ. ಆರೋಪಿಗಳನ್ನು ಬ್ಯಾಂಕ್‌ ಖಾತೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಹಣದ ವ್ಯವಹಾರ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಮಕ್ಕಳ ಮಾರಾಟ ದಂಧೆಗೆ ಇಳಿಯುವುದಕ್ಕೂ ಮೊದಲು ತಮಿಳುನಾಡಿನ ಆರೋಪಿಗಳ ಜತೆಗೆ ಮಹಾಲಕ್ಷ್ಮಿ ಸಹ ಐವಿಎಫ್‌ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕೇಂದ್ರ ಬಂದ್‌ ಆದ ಮೇಲೆ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದ ಮಹಾಲಕ್ಷ್ಮಿ, 2015ರಿಂದ 2017ರ ವರೆಗೆ ಕೆಲಸ ಮಾಡಿದ್ದಳು. ಆರಂಭಿಕ ದಿನಗಳಲ್ಲಿ ಮಾಸಿಕವಾಗಿ ₹8 ಸಾವಿರ ಸಂಬಳ ಪಡೆಯುತ್ತಿದ್ದಳು. ನಂತರದ ತಿಂಗಳಲ್ಲಿ ₹ 10 ಸಾವಿರದ ವರೆಗೆ ಸಂಬಳ ಪಡೆಯುತ್ತಿದ್ದಳು. ಸ್ವಲ್ಪ ದಿನಗಳ ಕಾಲ ತರಕಾರಿ ವ್ಯಾಪಾರ ಸಹ ಮಾಡಿದ್ದಳು’

‘ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾದ ಮಹಿಳೆಯೊಬ್ಬಳು ಅಂಡಾಣು ಕೊಟ್ಟರೆ ಹಣ ಕೊಡುವುದಾಗಿ ಮಹಾಲಕ್ಷ್ಮಿಗೆ ತಿಳಿಸಿದ್ದಳು. ಆಗ ಅಂಡಾಣು ಮಾರಾಟ ನಡೆಸಿದ್ದಕ್ಕೆ ₹20 ಸಾವಿರ ಲಭಿಸಿತ್ತು. ನಂತರ ಅಂಡಾಣು ಕೊಡುವವರನ್ನು ಮಹಾಲಕ್ಷ್ಮಿಯೇ ಸಂಪರ್ಕಿಸಿ, ಕಮಿಷನ್ ಪಡೆಯುತ್ತಿದ್ದಳು. 2017ರ ನಂತರ ತಮಿಳುನಾಡಿನ ಆರೋಪಿಗಳ ಜತೆಗೆ ಸೇರಿಕೊಂಡು ಮಕ್ಕಳ ಮಾರಾಟ ದಂಧೆಗೆ ಇಳಿದಳು. ಈ ಜಾಲದಿಂದ ಲಕ್ಷ ಲಕ್ಷ ಹಣ ಸಂಪಾದಿಸಿದ್ದಾಳೆ’ ಎಂದು ಮೂಲಗಳು ತಿಳಿಸಿವೆ

‘ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಹಾಲಕ್ಷ್ಮಿ ಬಳಿ 850 ಗ್ರಾಂಗೂ ಅಧಿಕ ಚಿನ್ನಾಭರಣ ಇದೆ. ಒಂದು ಕಾರು ಖರೀದಿಸಿದ್ದಾಳೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.