ಬೆಂಗಳೂರು:ನಗರದ ಶಾಲೆಗಳಲ್ಲಿ ಗುರುವಾರ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು. ಮಕ್ಕಳ ದಿನದ ಅಂಗವಾಗಿ ವಿವಿಧೆಡೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿ ಗಮನಸೆಳೆದರು.
ಸ್ವಾತಂತ್ರ್ಯ ಹೋರಾಟಗಾರರು, ಸಾಧಕರ ವೇಷಗಳಲ್ಲಿ ಕಂಗೊಳಿಸಿದ ಮಕ್ಕಳು, ಹಾಡು–ನೃತ್ಯ ಪ್ರದರ್ಶನ ನೀಡಿದರು. ಕೆಲವು ಮಕ್ಕಳು ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ಅವರಿಗೆ ಪತ್ರವನ್ನು ಬರೆದು ಗಮನ ಸೆಳೆದರು.
ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಜನ್ಮದಿನವಾಗಿದ್ದ ಗುರುವಾರ ಮಕ್ಕಳು ‘ಚಾಚಾಜಿ’ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಅವರ ಕುರಿತು ಭಾಷಣ ಮಾಡಿದರು.
ಚಲನಚಿತ್ರೋತ್ಸವಕ್ಕೆ ಚಾಲನೆ: ಸರ್ಕಾರಿ ಶಾಲೆಗಳಲ್ಲಿ ಡೆಲ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಚಾಲನೆ ನೀಡಿದರು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದೇಶದ ಏಳು ಸಾವಿರ ಸರ್ಕಾರಿ ಶಾಲೆಗಳಲ್ಲಿ ಈ ಚಿತ್ರೋತ್ಸವ ನಡೆಯಲಿದೆ.
ರಾಜಾಜಿನಗರದಲ್ಲಿ ಇರುವ ಕೆಎಲ್‍ಇ ಸೊಸೈಟಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಡೆಲ್–ಐಕೆಎಫ್‌ಎಫ್ ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಜಾಗತಿಕ ಮಟ್ಟದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಚಿತ್ರೋತ್ಸವದಲ್ಲಿ ಅತ್ಯುತ್ತಮವಾದ ಮಕ್ಕಳ ಚಿತ್ರ ವೀಕ್ಷಣೆಯಷ್ಟೇ ಅಲ್ಲದೆ, ಚಲನಚಿತ್ರ ನಿರ್ಮಾಣದ ಕುರಿತು ಏರ್ಪಡಿಸುವ ಸ್ಪರ್ಧೆಯಲ್ಲಿಯೂ ಪಾಲ್ಗೊಳ್ಳುವ ಅವಕಾಶವಿದೆ.
40 ದೇಶಗಳ 35 ಭಾಷೆಗಳ 100 ಕ್ಕೂ ಹೆಚ್ಚು ಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾಗಿ ಹೆಚ್ಚಿನವು ಪರಿಸರ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳಾಗಿವೆ.
ಬ್ಯಾಂಕಿಂಗ್ ಸೇವೆ ಅರಿವು: ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಸೌಲಭ್ಯಗಳ ಕುರಿತು ಉಪನ್ಯಾಸ ನೀಡುವ ಮೂಲಕ ಸಿಂಡಿಕೇಟ್ ಬ್ಯಾಂಕ್ ವಿಭಿನ್ನವಾಗಿ ಮಕ್ಕಳ ದಿನ ಕಾರ್ಯಕ್ರಮವನ್ನು ಆಚರಿಸಿತು.
ನ.4ರಿಂದ 14ರವರೆಗೆ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಚಿತ್ರರಚನೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿದ್ದ ಬ್ಯಾಂಕ್, ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿತು.
ಬಹುಮಾನ ವಿತರಣೆ:ಮಕ್ಕಳ ದಿನಾಚರಣೆ ಅಂಗವಾಗಿ ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯು (ಸಿಪಿಆರ್‌ಐ) ‘ಇಂಧನ ಉಳಿತಾಯ’ ಕುರಿತು ರಾಜ್ಯಮಟ್ಟದ ಚಿತ್ರರಚನಾ ಸ್ಪರ್ಧೆ ಏರ್ಪಡಿಸಿತ್ತು. 4ರಿಂದ 9ನೆಯ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
‘ಎ’ ಮತ್ತು ‘ಬಿ’ ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹50 ಸಾವಿರ, ₹30 ಸಾವಿರ ಹಾಗೂ ₹20 ಸಾವಿರ ನಗದು ಬಹುಮಾನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.