ADVERTISEMENT

ಬಾಲಮಂದಿರ: ಮತ್ತೆ 13 ಮಕ್ಕಳು ಪರಾರಿ!

ನಸುಕಿನಲ್ಲಿ ಗೃಹರಕ್ಷಕನ ಮೇಲೆ ಹಲ್ಲೆ ನಡೆಸಿ ಕೂಡಿಹಾಕಿದ ಬಾಲಕರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 19:34 IST
Last Updated 31 ಜುಲೈ 2018, 19:34 IST

ಬೆಂಗಳೂರು: ಮಡಿವಾಳದ ಬಾಲಮಂದಿರದಿಂದ ಜುಲೈ 23ರಂದು ತಪ್ಪಿಸಿಕೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಒಂಬತ್ತು ಬಾಲಕರು, ಮಂಗಳವಾರ ನಸುಕಿನಲ್ಲಿ ಗೃಹರಕ್ಷಕನ ಮೇಲೆ ಹಲ್ಲೆ ನಡೆಸಿ ಇನ್ನೂ ನಾಲ್ವರು ಮಕ್ಕಳ ಸಮೇತ ಮತ್ತೆ ಪರಾರಿಯಾಗಿದ್ದಾರೆ.

ಹೊರ ಹೋಗಿರುವ ಬಾಲಕರು 16ರಿಂದ 18 ವರ್ಷದವರು. ಒಬ್ಬ ಮಾತ್ರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಉಳಿದವರ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಮಡಿವಾಳ ಪೊಲೀಸರು ಹಾಗೂ ಬಾಲಮಂದಿರದ ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸಿಕೊಂಡು ಅವರ ಹುಡುಕಾಟ ಪ್ರಾರಂಭಿಸಿದ್ದಾರೆ.

ನಸುಕಿನ ವೇಳೆ (2 ಗಂಟೆಗೆ) ಬಾಲಕರು ಕೊಠಡಿಯಲ್ಲಿ ಜಗಳ ಪ್ರಾರಂಭಿಸಿದ್ದಾರೆ. ರಾತ್ರಿ ಪಾಳಿ ಭದ್ರತೆಗಿದ್ದ ಗೃಹರಕ್ಷಕ ಕೂಡಲೇ ಅಲ್ಲಿಗೆ ತೆರಳಿದ್ದಾರೆ. ಎಲ್ಲರೂ ಒಟ್ಟಾಗಿ ಅವರ ಹಲ್ಲೆ ನಡೆಸಿ, ನಂತರ ಹೊರಗಿನಿಂದ ಚಿಲಕ ಹಾಕಿಕೊಂಡು ಹೊರನಡೆದಿದ್ದಾರೆ.

ADVERTISEMENT

ಗೃಹರಕ್ಷಕ ಕೂಡಲೇ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹೊಯ್ಸಳ ಪೊಲೀಸರೂ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿಲ್ಲ.

‘ಬಾಲನ್ಯಾಯ ಕಾಯ್ದೆ‌ ಪ್ರಕಾರ ಪೊಲೀಸರು ಸಮವಸ್ತ್ರದಲ್ಲಿ ಬಾಲಮಂದಿರಕ್ಕೆ ಹೋಗುವಂತಿಲ್ಲ. ಹೀಗಾಗಿ, ನಾವು ಭದ್ರತೆ ಒದಗಿಸುವುದಿಲ್ಲ. ಗೃಹರಕ್ಷಕ ಸಿಬ್ಬಂದಿಯೇ ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲಮಂದಿರದ ಭದ್ರತೆಗೆ ಮಂಜೂರಾದ ಸಿಬ್ಬಂದಿಯ ಸಂಖ್ಯೆ 15. ಆದರೆ, ಸದ್ಯ ನಾಲ್ವರು ಗೃಹರಕ್ಷಕರು ಮಾತ್ರ ಇದ್ದಾರೆ. ಅವರೂ ಪಾಳಿಗೆ ಇಬ್ಬರಂತೆ ಎರಡು ಪಾಳಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಬಾಲಮಂದಿರದಲ್ಲಿ 74 ಮಕ್ಕಳಿದ್ದು, ಇಬ್ಬರು ಸಿಬ್ಬಂದಿಯಿಂದ ಅವರ ನಿಯಂತ್ರಣ ಸಾಧ್ಯವಿಲ್ಲ. ಅಲ್ಲಿರುವ ಅವ್ಯವಸ್ಥೆ, ಪೋಷಕರ ಭೇಟಿಗೆ ಅವಕಾಶ ನೀಡದಿರುವುದು, ಬಹಳ ದಿನಗಳವರೆಗೆ ಜಾಮೀನು ಸಿಗದೆ ಇರುವುದು ಸಹಜವಾಗಿಯೇ ಬಾಲಕರನ್ನು ಕೆರಳಿಸುತ್ತದೆ. ಹೀಗಾಗಿ, ಅವರು ಪದೇ ಪದೇ ತಪ್ಪಿಸಿಕೊಳ್ಳುತ್ತಾರೆ’ ಎಂದು ವಿವರಿಸಿದರು.

ಶೌಚಾಲಯದಿಂದ ಹೋಗಿದ್ದರು

ಜುಲೈ 23ರಂದು ಒಂಬತ್ತು ಬಾಲಕರು ಶೌಚಾಲಯದ ಸರಳು ಮುರಿದುಪರಾರಿಯಾಗಿದ್ದರು. ಮಡಿವಾಳ ಪೊಲೀಸರು ಮೂರೇ ದಿನಗಳಲ್ಲಿ ಆ ಬಾಲಕರನ್ನು ಪತ್ತೆ ಮಾಡಿ ಪುನಃ ಬಾಲಮಂದಿರಕ್ಕೆ ಬಿಟ್ಟಿದ್ದರು. ‘ಭದ್ರತಾ ಲೋಪದಿಂದ ಪರಾರಿ ಪ್ರಕರಣಗಳು ಮರುಳಿಸುತ್ತಲೇ ಇವೆ’ ಎಂದು ಪೊಲೀಸರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.