ADVERTISEMENT

‘ಬ್ಯಾಡಗಿ’ ಮೆಣಸಿನಕಾಯಿ ಬಲು ದುಬಾರಿ

ಮಸಾಲಾ ತಯಾರಿಸುವ ಕಂಪನಿಗಳಿಂದ ಹೆಚ್ಚಿದ ಬೇಡಿಕೆ

ಮನೋಹರ್ ಎಂ.
Published 10 ಮಾರ್ಚ್ 2020, 22:32 IST
Last Updated 10 ಮಾರ್ಚ್ 2020, 22:32 IST
ಬ್ಯಾಡಗಿ ಮೆಣಸಿನಕಾಯಿ -ಪ್ರಜಾವಾಣಿ ಚಿತ್ರ
ಬ್ಯಾಡಗಿ ಮೆಣಸಿನಕಾಯಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೇಸಿಗೆ ಸಮೀಪಿಸುತ್ತಿದ್ದಂತೆ ಬ್ಯಾಡಗಿ ಮೆಣಸಿನಕಾಯಿ ದರ ಗಣನೀಯ ಏರಿಕೆ ಕಂಡಿದೆ. ದಾಸ್ತಾನು ಕೊರತೆ, ಹೆಚ್ಚಿದ ಬೇಡಿಕೆಯಿಂದ ಬೆಲೆ ದುಪ್ಪಟ್ಟಾಗಿದೆ. ರೈತರು, ವ್ಯಾಪಾರಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಬ್ಯಾಡಗಿ ಮೆಣಸಿನಕಾಯಿ ಕಡುಕೆಂಪು ಬಣ್ಣದಿಂದ ಕೂಡಿರುತ್ತದೆ. ಖಾರ ತುಸು ಕಡಿಮೆ. ಉಳಿದ ಮೆಣಸಿನಕಾಯಿಗಳಂತೆ ಬೇಗನೆ ಹಾಳಾಗುವುದಿಲ್ಲ. ಈ ಎಲ್ಲ ವೈಶಿಷ್ಟ್ಯಗಳಿಂದ ಇತರ ಮೆಣಸಿನಕಾಯಿಗಳ ದರಕ್ಕಿಂತ ಬ್ಯಾಡಗಿ ದರ ಜಾಸ್ತಿ.

ಕ್ವಿಂಟಲ್‌ಗೆ ಹೆಚ್ಚೆಂದರೆ ₹10 ಸಾವಿರದಿಂದ ₹15 ಸಾವಿರ ಇರುತ್ತಿದ್ದ ಬ್ಯಾಡಗಿ ಮೆಣಸಿನ ದರ, 20 ದಿನಗಳಿಂದ ಏರುತ್ತಲೇ ಸಾಗಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಕ್ವಿಂಟಲ್‌ಗೆ ₹25 ಸಾವಿರದಿಂದ ₹35 ಸಾವಿರದಷ್ಟಿತ್ತು. ಉತ್ತಮ ಗುಣಮಟ್ಟದ ಬ್ಯಾಡಗಿ ಮೆಣಸು ಮಂಗಳವಾರ ಕ್ವಿಂಟಲ್‌ಗೆ ₹43 ಸಾವಿರದಂತೆ ಮಾರಾಟವಾಯಿತು. ಹೊಸ ಬೆಳೆ ಬರುವವರೆಗೂ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ADVERTISEMENT

‘ತಿಂಗಳಿನಿಂದ ಮಾರುಕಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದ ಮೆಣಸು ಆವಕವಾಗುತ್ತಿಲ್ಲ. ನೆರೆಯಿಂದ ಬಹುತೇಕ ಬೆಳೆ ಹಾನಿಗೊಳಗಾಗಿದೆ. ದಾಸ್ತಾನು ಕಡಿಮೆ ಇದೆ. ಹೊರ ರಾಜ್ಯಗಳೂ ಸೇರಿ ವಿದೇಶಗಳಿಂದ ಬ್ಯಾಡಗಿ ಮೆಣಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ರಫ್ತು ಮಾಡುವಷ್ಟು ಮೆಣಸು ದಾಸ್ತಾನು ಇಲ್ಲ’ ಎನ್ನುತ್ತಾರೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಪಿಸಿಎಸ್‌ ಟ್ರೇಡರ್ಸ್‌ ಮಾಲೀಕ ಎನ್‌.ಪ್ರಭಾಕರ್‌.

‘ಪಕ್ಕದ ಆಂಧ್ರಪ್ರದೇಶದಲ್ಲಿ ರಾಜ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯುತ್ತಾರೆ. ಆದರೆ, ಅಲ್ಲಿನ ಗುಂಟೂರು ಮೆಣಸಿನಕಾಯಿ ಹೊರತುಪಡಿಸಿದರೆ ಉಳಿದ ತಳಿಗಳಿಗೆ ಬೇಡಿಕೆ ಕಡಿಮೆ. ಇವು ಹೆಚ್ಚು ಖಾರ ಇರುತ್ತವೆ. ಆದರೆ, ಹೆಚ್ಚು ದಿನ ದಾಸ್ತಾನು ಮಾಡಲು ಆಗುವುದಿಲ್ಲ. ರಾಜ್ಯದಬ್ಯಾಡಗಿ ಮೆಣಸು ದೀರ್ಘಕಾಲದವರೆಗೆ ಹಾಳಾಗದ ಕಾರಣ ಖಾರದ ಪುಡಿ ತಯಾರಿಕೆಗೆ ಹೆಚ್ಚು ಸೂಕ್ತ. ಈ ಕಾರಣದಿಂದಲೇ ಮಸಾಲ ಕಂಪನಿಗಳು ಬ್ಯಾಡಗಿ ಮೆಣಸನ್ನೇ ಹೆಚ್ಚು ಖರೀದಿಸುತ್ತಿವೆ’ ಎಂದು ಮಾಹಿತಿ ನೀಡಿದರು.

‘ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಈ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಹಾಗಾಗಿ ಇದನ್ನು ಬ್ಯಾಡಗಿ ಹೆಸರಿನಿಂದಲೇ ಕರೆಯಲಾಗುತ್ತದೆ. ಹಾವೇರಿ ಜೊತೆಗೆ ಧಾರವಾಡ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲೂ ಇದನ್ನು ಬೆಳೆಯುತ್ತಾರೆ. ಹುಬ್ಬಳ್ಳಿ–ಧಾರವಾಡ ಭಾಗದ ಮೆಣಸಿಗೆ ಬೇಡಿಕೆ ಹೆಚ್ಚು. ತೊಟ್ಟು ಹಾಗೂ ತೊಟ್ಟುರಹಿತ ಮೆಣಸಿನತೂಕದಲ್ಲಿ ವ್ಯತ್ಯಾಸ ಇರುತ್ತದೆ. 1 ಕೆ.ಜಿ ತೊಟ್ಟುಸಹಿತ ಮೆಣಸಿನಲ್ಲಿ ತೊಟ್ಟಿನ ತೂಕವೇ 200 ಗ್ರಾಂಗಳಷ್ಟಿರುತ್ತದೆ. ಇದರಿಂದ ಗ್ರಾಹಕರು ತೊಟ್ಟುರಹಿತ ಮೆಣಸಿನ ಖರೀದಿಗೆ ಮುಗಿ ಬೀಳುತ್ತಾರೆ’ ಎಂದು ವಿವರಿಸಿದರು.

ನೈಸರ್ಗಿಕ ಬಣ್ಣ ತಯಾರಿಗೆ ಬಳಕೆ
ನೈಸರ್ಗಿಕ ಬಣ್ಣ ತಯಾರಿಕೆಗೆ ಬ್ಯಾಡಗಿ ಮೆಣಸು ಹೆಚ್ಚು ರಫ್ತಾಗುತ್ತದೆ. ಇದರಲ್ಲಿರುವ‘ಪ್ಯಾಪ್ರಿಕ’ ಅಂಶ ನೈಸರ್ಗಿಕ ಬಣ್ಣದ ತಯಾರಿಗೆ ಸೂಕ್ತವಾದುದು. ಈ ಮೆಣಸಿನಲ್ಲಿರುಚಿ, ಘಾಟು, ಖಾರ ನೀಡುವ ‘ಒಲಿಯೊರೆಸಿನ್‌’ ಅಂಶವೂ ಅಧಿಕವಾಗಿದ್ದು, ಇದನ್ನು ಪ್ರತ್ಯೇಕಿಸಿ,ಸಿದ್ಧ ಆಹಾರ ಉತ್ಪನ್ನಗಳು, ಪಾನೀಯ, ಸಾಸ್, ಔಷಧ ತಯಾರಿಗೆ ಬಳಸಲಾಗುತ್ತದೆ. ಎಣ್ಣೆ, ನೈಲ್‍ಪಾಲಿಶ್ ಹಾಗೂ ಲಿಪ್‌ಸ್ಟಿಕ್ ತಯಾರಿಸುವುದಕ್ಕೂ ಹೆಚ್ಚಾಗಿ ಬಳಸುತ್ತಾರೆ.

ಉತ್ಪಾದನೆ, ರಫ್ತಿನಲ್ಲಿ ಅಗ್ರಸ್ಥಾನ: ವಿಶ್ವದಲ್ಲಿ ಭಾರತ ಮೆಣಸಿನಕಾಯಿ ಉತ್ಪಾದನೆ ಹಾಗೂ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಬ್ಯಾಡಗಿ ಸೇರಿ ಹೆಚ್ಚು ಖಾರ ನೀಡುವಮೆಣಸಿನಕಾಯಿ ಹಾಗೂ ಖಾರದ ಪುಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಕೊರಿಯ, ಅಮೆರಿಕ, ಜರ್ಮನ್, ಜಪಾನ್, ಮಧ್ಯ ಏಷ್ಯಾ ಹಾಗೂ ಇನ್ನಿತರ ರಾಷ್ಟ್ರಗಳಲ್ಲಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಇದೆ.

*
ದಾಸ್ತಾನು ಕೊರತೆಯಿಂದ ಬ್ಯಾಡಗಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಏಪ್ರಿಲ್–ಮೇಗೆ ಹೊಸ ಉತ್ಪನ್ನ ಬರಲಿದೆ. ಅಲ್ಲಿವರೆಗೆ ದರ ಇನ್ನಷ್ಟು ಏರಬಹುದು.
-ವ್ಯಾಪಾರಿ, ಯಶವಂತಪುರ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.