ADVERTISEMENT

ಬೆಂಗಳೂರು | ಚಿಟ್‌ ಫಂಡ್‌ ಸಂಸ್ಥೆ ಅಧಿಕಾರಿ ಕೊಲೆ: ಆರೋಪಿ ಬಂಧನ

ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 0:17 IST
Last Updated 9 ಜೂನ್ 2024, 0:17 IST
ಮಾಧವರಾವ್‌
ಮಾಧವರಾವ್‌   

ಬೆಂಗಳೂರು: ವಿಜಿನಪುರದ ಮನೆಯೊಂದರಲ್ಲಿ ಚಿಟ್‌ ಫಂಡ್‌ ಸಂಸ್ಥೆಯ ಅಧಿಕಾರಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿ, ದೇಹದ ಭಾಗಗಳನ್ನು ಕಾಲುವೆಗೆ ಎಸೆದಿದ್ದ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸ್‌ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.

ವಿಜಿನಪುರದ ನಿವಾಸಿ ಮಾಧವರಾವ್‌ ಬಂಧಿತ ಆರೋಪಿ. ಬಸವೇಶ್ವರನಗರದ ಮಾರ್ಗದರ್ಶಿ ಚಿಟ್ ಫಂಡ್‌ ಸಂಸ್ಥೆಯಲ್ಲಿ ಅಭಿವೃದ್ಧಿ ಅಧಿಕಾರಿ ಆಗಿದ್ದ ಶ್ರೀನಾಥ್‌ (34) ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿ, ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ. ಸಂಪಿಗೆಹಳ್ಳಿ ಹಾಗೂ ರಾಮಮೂರ್ತಿನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋ‍ಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

11ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ರಾಮಮೂರ್ತಿನಗರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ADVERTISEMENT

‘ಥಣಿಸಂದ್ರದ ಅಂಜನಾದ್ರಿ ಲೇಔಟ್‌ನಲ್ಲಿ ಶ್ರೀನಾಥ್‌ ಅವರು ಪತ್ನಿಯೊಂದಿಗೆ ನೆಲೆಸಿದ್ದರು. ಅಲ್ಲಿಂದ ಬಸವೇಶ್ವರ ನಗರದ ತಮ್ಮ ಕಚೇರಿಗೆ ತೆರಳುತ್ತಿದ್ದರು. ಆರೋಪಿ ಮಾಧವರಾವ್‌ ಹಾಗೂ ಶ್ರೀನಾಥ್‌ಗೂ ಎರಡು ವರ್ಷದ ಪರಿಚಯ ಇತ್ತು. ಶ್ರೀನಾಥ್‌ ಬಳಿ ಮಾಧವರಾವ್‌ ₹5 ಲಕ್ಷ ಚೀಟಿ ಹಣ ಪಡೆದಿದ್ದ. ಚೀಟಿ ಹಣವನ್ನು ವಾಪಸ್‌ ನೀಡುವಂತೆ ಶ್ರೀನಾಥ್‌ ಆಗಾಗ್ಗೆ ಮನವಿ ಮಾಡುತ್ತಿದ್ದರು. ಎಷ್ಟು ಬಾರಿ ಕೇಳಿದರೂ ಹಣ ವಾಪಸ್‌ ನೀಡಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು’ ಎಂದು ಮೂಲಗಳು ಹೇಳಿವೆ.

‘ಮೇ 28ರಂದು ಹಣ ಕೇಳಲು ಶ್ರೀನಾಥ್‌ ಅವರು, ಮಾಧವರಾವ್‌ ಮನೆಗೆ ತೆರಳಿದ್ದರು. ಆಗ ಮತ್ತೆ ಗಲಾಟೆ ನಡೆದಿದೆ. ಮಾಧವರಾವ್‌ ಪತ್ನಿ ಜತೆಗೂ ಕೊಲೆಯಾದ ಶ್ರೀನಾಥ್‌ಗೆ ಸ್ನೇಹವಿತ್ತು. ಈ ಎರಡೂ ವಿಷಯಕ್ಕೂ ಗಲಾಟೆ ನಡೆದು, ಮನೆಯಲ್ಲಿದ್ದ ರಾಡ್‌ನಿಂದ ಶ್ರೀನಾಥ್‌ ತಲೆಗೆ ಆರೋಪಿ ಹೊಡೆದಿದ್ದ. ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದರು. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಬೈಕ್‌ನಲ್ಲಿ ಕೊಂಡೊಯ್ದು ಬೆಳ್ಳತ್ತೂರು ಬಳಿಯ ಕಾಲುವೆಗೆ ಎಸೆದಿದ್ದ’ ಎನ್ನಲಾಗಿದೆ.

ಶ್ರೀನಾಥ್‌ ಮನೆಗೆ ಬಾರದಿದ್ದರಿಂದ ಅವರ ಪತ್ನಿ ಮೇ 29ರಂದು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಮನೆಯ ಒಳಕ್ಕೆ ಶ್ರೀನಾಥ್‌ ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಮನೆಯಿಂದ ವಾಪಸ್ ಬಂದಿರುವ ದೃಶ್ಯ ಇರಲಿಲ್ಲ. ಮನೆ ಪರಿಶೀಲಿಸಿದಾಗ ರಕ್ತದ ಕಲೆಗಳು ಕಂಡುಬಂದಿದ್ದವು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಷಯ ಬಾಯ್ಟಿಟ್ಟಿದ್ಧಾನೆ’ ಎಂದು ಮೂಲಗಳು ತಿಳಿಸಿವೆ.

ಶ್ರೀನಾಥ್‌
ಆಂಧ್ರಪ್ರದೇಶದಲ್ಲಿ ಆರೋಪಿ ಬಂಧನ
‘ಆಂಧ್ರಪ್ರದೇಶದಿಂದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಮಾಧವರಾವ್‌ ಬಂದಿದ್ದ. ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಪುತ್ರನ ಜೊತೆಗೆ ನೆಲೆಸಿದ್ದ. ಕೊಲೆ ನಡೆದ ದಿನ ಆರೋಪಿಯ ಪತ್ನಿ ತವರು ಮನೆಗೆ ತೆರಳಿದ್ದರು. ಶ್ರೀನಾಥ್‌ ಮನೆಗೆ ಬಂದ ಕೂಡಲೇ ಮಗನನ್ನು ಹೊರಕ್ಕೆ ಕಳುಹಿಸಿದ್ದ. ಮಾಧವರಾವ್‌ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದ’ ಎಂದು ಮೂಲಗಳು ಹೇಳಿವೆ.
ಸಿಗದ ದೇಹದ ತುಂಡುಗಳು
‘ಕಾಲುವೆಯಲ್ಲಿ ಕಲುಷಿತ ನೀರು ಹರಿಯುತ್ತಿದೆ. ಕಳೆಗಿಡಗಳು ಬೆಳೆದಿವೆ. ಈ ನಡುವೆ ಧಾರಾಕಾರ ಮಳೆ ಸುರಿದ ಪರಿಣಾಮ ಕಾಲುವೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ದೇಹದ ತುಂಡುಗಳನ್ನು ತುಂಬಿದ್ದ ಚೀಲ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ. ಚೀಲ ಹುಡುಕಲು ಮಂಗಳೂರಿನಿಂದ ಮುಳುಗು ತಜ್ಞರನ್ನು ಕರೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.