ADVERTISEMENT

ವಂಚನೆ ಹಣದಲ್ಲೇ ಸಾವಿರ ಸೈಟ್ ಖರೀದಿ!

ಬೆಳ್ಳಂದೂರು ಪೊಲೀಸ್ ಬಲೆಗೆ ಬಿದ್ದ ತಂದೆ–ಮಗ * ಬಂಗಾರಪೇಟೆಯಲ್ಲಿ ₹ 500 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 18:53 IST
Last Updated 16 ನವೆಂಬರ್ 2018, 18:53 IST
ಷಣ್ಮುಗಂ
ಷಣ್ಮುಗಂ   

ಬೆಂಗಳೂರು: ‘ಷಣ್ಮುಗಂ ಫೈನಾನ್ಸ್’ ಹಾಗೂ ‘ಆರ್‌.ಕೆ.ಎನ್ ಚಿಟ್ ಫಂಡ್ ಇನ್ವೆಸ್ಟ್‌ಮೆಂಟ್’ ಸಂಸ್ಥೆಗಳ ಹೆಸರಿನಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿರುವ ಬಂಗಾರಪೇಟೆಯ ರೈಸ್ ಮಿಲ್ ಮಾಲೀಕ ಷಣ್ಮುಗಂ, ಅವರ ಮಗ ದಿಲೀಪ್ ಹಾಗೂ ಕಂಪನಿಯ ಕ್ಯಾಷಿಯರ್ ನಾಗರಾಜ್ ಅವರು ಬೆಳ್ಳಂದೂರು ಪೊಲೀಸರ ಅತಿಥಿಗಳಾಗಿದ್ದಾರೆ.

ಈ ಮೂವರ ವಿರುದ್ಧ ಬಸವನಗುಡಿಯ ಪಿ.ಆರ್.ಸತ್ಯನಾರಾಯಣ್ ಎಂಬುವರು ನ.8ರಂದು ದೂರು ಕೊಟ್ಟಿದ್ದರು. ‘ಸರ್ಜಾಪುರ ರಸ್ತೆಯಲ್ಲಿ ಕಡಿಮೆ ಬೆಲೆಗೆ ಜಮೀನು ಕೊಡಿಸುವುದಾಗಿ ನಂಬಿಸಿ ₹ 6 ಕೋಟಿ ಪಡೆದುಕೊಂಡಿದ್ದಾರೆ. ಈಗ ಜಮೀನು ಕೊಡಿಸದೆ, ಹಣವನ್ನೂ ಮರಳಿಸದೆ ಸತಾಯಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದರು.

‘ಆರೋಪಿಗಳನ್ನು ನ.9ರಂದು ಬಂಗಾರಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆವು. ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಸತ್ಯನಾರಾಯಣ್ ಅವರ ಹಣವನ್ನು ವಾರದೊಳಗೆ ಮರಳಿಸುವುದಾಗಿ ತಿಳಿಸಿದ್ದಾರೆ’ ಎಂದು ಬೆಳ್ಳಂದೂರು ಪೊಲೀಸರು ಹೇಳಿದರು.

ADVERTISEMENT

‘ಬಂಗಾರಪೇಟೆ ಠಾಣೆ ವ್ಯಾಪ್ತಿಯಲ್ಲೇ ಷಣ್ಮುಗಂ ಅವರ 1 ಸಾವಿರ ನಿವೇಶನಗಳಿವೆ. ಬೆಂಗಳೂರು ಹಾಗೂ ತಮಿಳುನಾಡಿನಲ್ಲೂ ಆಸ್ತಿ ಹೊಂದಿದ್ದಾರೆ. ಅವರ ಆಸ್ತಿ ಹರಾಜು ಹಾಕಿ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

**

₹ 500 ಕೋಟಿ ವಂಚನೆ

ಅಧಿಕ ಬಡ್ಡಿಯ ಆಸೆಗೆ ಬಿದ್ದು ಘಟಾನುಘಟಿ ರಾಜಕಾರಣಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಮಂದಿಷಣ್ಮುಗಂ ಸಂಸ್ಥೆಯಲ್ಲಿ ಹಣ ಹೂಡಿದ್ದಾರೆ. ಮೊದಲು ಬಡ್ಡಿ ಸಮೇತ ಹಣ ಮರಳಿಸಿ ಗ್ರಾಹಕರ ವಿಶ್ವಾಸ ಗಿಟ್ಟಿಸಿಕೊಳ್ಳುವ ಆರೋಪಿಗಳು, ಹೆಚ್ಚು ಹಣ ಹೂಡಿದ ಬಳಿಕ ತಮ್ಮ ಅಸಲಿತನ ತೋರಿಸುತ್ತಿದ್ದರು. ಈವರೆಗೆ ಸುಮಾರು ₹ 500 ಕೋಟಿ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದಾದ ಬಳಿಕ ಸಂಕಷ್ಟಕ್ಕೆ ಸಿಲುಕಿದ ತಂದೆ–ಮಗ, ಹೂಡಿಕೆದಾರರಿಗೆ ಚೆಕ್‌ಗಳನ್ನು ವಿತರಿಸಿ ಸಮಾಧಾನಪಡಿಸಲು ಯತ್ನಿಸಿದ್ದರು. ಆದರೆ, ಎಲ್ಲ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಜನ ಕೋರ್ಟ್ ಹಾಗೂ ಠಾಣೆಗಳ ಮೆಟ್ಟಿಲೇರಿದ್ದರು. ತಮ್ಮ ಹಣ ವಾಪಸ್ ಕೊಡಿಸುವಂತೆ ಹೂಡಿಕೆದಾರರು ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.