ADVERTISEMENT

ಚಿತ್ರಸಂತೆ: ಕುಮಾರ ಕೃಪಾ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 23:32 IST
Last Updated 5 ಜನವರಿ 2024, 23:32 IST
   

ಬೆಂಗಳೂರು: ಚಿತ್ರಕಲಾ ಪರಿಷತ್‌, ಜ.7ರಂದು ಕುಮಾರ ಕೃಪಾ ರಸ್ತೆಯಲ್ಲಿ 21ನೇ ಚಿತ್ರಸಂತೆ ಆಯೋಜಿಸಿದ್ದು ಅಂದು ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕುಮಾರ ಕೃಪಾ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಕುಮಾರಕೃಪಾ ರಸ್ತೆ ಹಾಗೂ ಹರೇ ಕೃಷ್ಣ ರಸ್ತೆಯ ಉಕ್ಕಿನ ಕೆಳಸೇತುವೆ ಭಾಗದ ಶಿವಾನಂದ ವೃತ್ತದಿಂದ ಗುರುರಾಜ ಜಂಕ್ಷನ್ ಬಳಿಯ ನವಕರ್ನಾಟಕ ಪಬ್ಲಿಕೇಷನ್ ಕಟ್ಟಡದವರೆಗಿನ ಉತ್ತರ ಭಾಗದ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಹಾಗೂ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಹನಗಳ ಮಾರ್ಗ ಬದಲಾವಣೆ: ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನ ಸಂಚಾರವನ್ನು ರೇಸ್ ವ್ಯೂ ಜಂಕ್ಷನ್ ಮೂಲಕ ಕೆ.ಕೆ.ರಸ್ತೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ADVERTISEMENT

ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ –ಬಸವೇಶ್ವರ ವೃತ್ತ ಹಳೇ ಹೈಗೌಂಡ್ಸ್‌ ಜಂಕ್ಷನ್ – ವಿಂಡ್ಸನ್ ಮ್ಯಾನರ್‌ ವೃತ್ತದ ಮೂಲಕ ಮುಂದಕ್ಕೆ ಸಾಗಬೇಕು.

ಟಿ.ಚೌಡಯ್ಯ ರಸ್ತೆಯಿಂದ ಬಂದು ವಿಂಡ್ಸನ್ ಮ್ಯಾನರ್ ವೃತ್ತದ ಮೂಲಕ ಕೆ.ಕೆ.ರಸ್ತೆ ಪ್ರವೇಶಿಸುವ ವಾಹನಗಳನ್ನು ವಿಂಡ್ಸರ್ ಮ್ಯಾನರ್ ಬಳಿ ನಿರ್ಬಂಧಿಸಲಾಗಿದೆ. ಈ ವಾಹನಗಳು ಟಿ.ಚೌಡಯ್ಯ ರಸ್ತೆ–ಹಳೇ ಹೈಗ್ರೌಂಡ್ಸ್‌ ಜಂಕ್ಷನ್- ಎಲ್ಆರ್‌ಡಿಇ ಬಸವೇಶ್ವರ ವೃತ್ತ ರೇಸ್ ಕೋರ್ಸ್ ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ.

ಶೇಷಾದ್ರಿಪುರ ಕಡೆಯಿಂದ ನೆಹರೂ ವೃತ್ತದ ಮಾರ್ಗವಾಗಿ ಚಾಲುಕ್ಯ ಸರ್ಕಲ್ ಕಡೆ ಹೋಗುವವರು ಶಿವಾನಂದ ವೃತ್ತದ ಮೇಲ್ಸೇತುವೆ (ಸ್ಟೀಲ್ ಬ್ರಿಡ್ಜ್‌) ಮೂಲಕ ಮುಂದಕ್ಕೆ ತೆರಳಬಹುದಾಗಿದೆ.

ಜನಸ್ಪಂದನ: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜ.6ರಂದು ನಾಗರಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೆಲವು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಸೇಂಟ್ ಜಾನ್ಸ್‌ ರಸ್ತೆ, ಗಂಗಾಧರಚೆಟ್ಟಿ ರಸ್ತೆ, ಡಿಕನ್ಸನ್ ರಸ್ತೆಯ ಎರಡೂ ಬದಿಯಲ್ಲಿ ನಿರ್ಬಂಧಿಲಾಗಿದೆ.

ವಾಹನ ನಿಲುಗಡೆ ಸ್ಥಳಗಳು: ದ್ವಿಚಕ್ರ ವಾಹನ ಸವಾರರಿಗೆ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಮತ್ತು ಶ್ರೀಸರ್ಕಲ್‌ನಿಂದ ಆರ್‌ಬಿಐ ಸರ್ಕಲ್‌ವರೆಗೆ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ನಾಲ್ಕು ಚಕ್ರದ ವಾಹನ ಸವಾರರಿಗೆ ಸೇಂಟ್‌ ಜಾನ್ಸ್‌ ರಸ್ತೆಯ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಆವರಣ, ಡಿಕನ್ಸನ್ ರಸ್ತೆಯ ಹಸನತ್ ಕಾಲೇಜು ಮೈದಾನ, ಡಿಕನ್ಸನ್ ರಸ್ತೆಯ ಆರ್‌ಬಿಎಎನ್‌ಎಂಎಸ್ ಶಾಲೆಯ ಮೈದಾನ, ತಿರುವಳ್ಳೂವರ್ ಪ್ರತಿಮೆಯ ಹಿಂಭಾಗದ ಆರ್‌ಬಿಎಎನ್‌ಎಂಎಸ್ ಸಂಜೆ ಕಾಲೇಜಿನ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.