ಬೆಂಗಳೂರು: ಎತ್ತ ಕಣ್ಣು ಹಾಯಿಸಿದರೂ ಬಣ್ಣ ಬಣ್ಣದ ಚಿತ್ತಾರ. ಸ್ಥಳದಲ್ಲಿಯೇ ತಮ್ಮ ಕೈಚಳಕ ತೋರುವ ಕಲಾವಿದರು. ಕಲಾರಸಿಕರ ಬೆರಗು ಹೆಚ್ಚಿಸುವ ವಿಭಿನ್ನ ಪ್ರಕಾರಗಳ ಕಲಾಕೃತಿಗಳು. ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ ಕಲಾಸಕ್ತರ ದಂಡು.
ಈ ದೃಶ್ಯ ಕಂಡದ್ದು ಕುಮಾರಕೃಪಾ ರಸ್ತೆಯಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡ 21ನೇ ಚಿತ್ರಸಂತೆಯಲ್ಲಿ ಕಲಾಲೋಕವೇ ಅನಾವರಣಗೊಂಡಿತ್ತು. ಈ ಚಿತ್ರಸಂತೆಯು ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೂ ಅವಕಾಶ ಒದಗಿಸಿತ್ತು. ಚಿತ್ರಸಂತೆಯು ಕಲಾವಿದರ ಮತ್ತು ಕಲಾಸಕ್ತರ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಾಯಿತು. ರಂಗುರಂಗಿನ ಕಲಾಕೃತಿಗಳು ಕಲಾರಸಿಕರ ಸಂಭ್ರಮವನ್ನೂ ಇಮ್ಮಡಿಗೊಳಿಸಿದವು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಾಡಿದ ಸಾಧನೆ ಹಾಗೂ ಚಂದ್ರಯಾನ–3ರ ಯಶಸ್ಸಿನಿಂದಾಗಿ ಈ ಬಾರಿಯ ಚಿತ್ರಸಂತೆಯನ್ನು ಭಾರತೀಯ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗಿತ್ತು. ಪರಿಷತ್ತಿನ ಆವರಣದಲ್ಲಿ ಚಂದ್ರಯಾನ–3ರ ಪ್ರತಿಕೃತಿಯನ್ನೂ ಮಾಡಲಾಗಿತ್ತು. ಇದು ನೆರದಿದ್ದವರ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು. ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳ ಜತೆಗೆ ಕರಕುಶಲ ವಸ್ತುಗಳು ಹಾಗೂ ಕಲಾಕೃತಿ ರಚನೆಗೆ ಅಗತ್ಯವಿರುವ ಬಣ್ಣ ಮತ್ತು ಅಗತ್ಯ ವಸ್ತುಗಳನ್ನೂ ಮಾರಾಟಕ್ಕೆ ಇರಿಸಲಾಗಿತ್ತು.
ನಾನಾ ಪ್ರಕಾರದ ಕಲಾಕೃತಿ: ಮರಳಿನ ಚಿತ್ರಕಲೆ, ಜಲವರ್ಣ, ಆ್ಯಕ್ರಿಲಿಕ್, ಮಧುಬನಿ, ತೈಲವರ್ಣ, ಡಿಜಿಟಲ್ ಪೇಂಟಿಂಗ್, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಕಾಫಿ ಪೇಂಟಿಂಗ್ ಸೇರಿ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು. ಒಂದಕ್ಕಿಂತ ಮತ್ತೊಂದು ಕಲಾಕೃತಿಗಳು ಬೇರೊಂದು ಆಲೋಚನೆಗೆ ಹಚ್ಚಿದವು. ಅನುಪಯುಕ್ತ ವಸ್ತುಗಳೂ ಕಲಾಕೃತಿಯ ರೂಪ ಪಡೆದಿದ್ದವು. ಒಡೆದು ಹೋದ ಗಿಟಾರ್, ಕಾರ್ಯನಿರ್ವಹಿಸದ ವೀಣೆ ಸೇರಿ ವಿವಿಧ ಸಂಗೀತ ಉಪಕರಣಗಳಿಗೂ ಕಲಾವಿದರು ಬಣ್ಣದ ಸ್ಪರ್ಶದೊಂದಿಗೆ ಹೊಸ ರೂಪ ನೀಡಿದ್ದರು.
ದೈವ ಕೋಲ, ಯಕ್ಷಗಾನ ವೇಷಧಾರಿಗಳು, ಮಹಿಳೆಯರ ವಿವಿಧ ಭಂಗಿಗಳು, ಪರಿಸರ, ವನ್ಯಜೀವಿಗಳು, ಐತಿಹಾಸಿಕ ದೇವಸ್ಥಾನಗಳು, ಗ್ರಾಮೀಣ ಸೊಗಡು, ಪೌರಾಣಿಕ ಪಾತ್ರಧಾರಿಗಳು, ಜಾನಪದ ನೃತ್ಯ, ಉತ್ಸವ ಹಾಗೂ ಧಾರ್ಮಿಕ ಆಚರಣೆಗಳು, ವಿಷ್ಣು, ಗಣಪತಿ ಸೇರಿ ವಿವಿಧ ದೇವರು, ನಾಟ್ಯರಾಣಿ ಶಾಂತಲೆ, ಗೌತಮ ಬುದ್ಧ ಹಾಗೂ ಕಾಡು ಹಣ್ಣುಗಳ ಕಲಾಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು.
ರಸ್ತೆಯ ಉದ್ದಕ್ಕೂ ವ್ಯಕ್ತಿಯ ಭಾವಚಿತ್ರ ಹಾಗೂ ವ್ಯಂಗ್ಯ ಚಿತ್ರಗಳನ್ನು ಬಿಡಿಸುವವರು ಕಾಣಸಿಗುತ್ತಿದ್ದರು. ಪುಟ್ಟ ಮಕ್ಕಳು ಭಾವಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರೆ, ಯುವಕ ಯುವತಿಯರು ಹಚ್ಚೆ ಹಾಕಿಸಿಕೊಂಡು ಖುಷಿ ಪಟ್ಟರು.
ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಸಂಚಾರಿ ಎಟಿಎಂ ವ್ಯವಸ್ಥೆ ಮಾಡಲಾಗಿತ್ತು. ಯುಪಿಐ ಆಧಾರಿತ ಆ್ಯಪ್‌ಗಳಿಂದಲೂ ಖರೀದಿ ವಹಿವಾಟು ನಡೆಯುತ್ತಿದ್ದುದು ಕಂಡುಬಂತು. ಸಂತೆಗೆ ಬಂದವರ ಹಸಿವು ನೀಗಿಸಲು ರುಚಿರುಚಿ ಆಹಾರದ ಮಳಿಗೆಗಳೂ ಇದ್ದವು.
ಚಿತ್ರಸಂತೆಗೆ ಹದಿನೈದು ವರ್ಷಗಳಿಂದ ಬರುತ್ತಿದ್ದೇನೆ. ಹೆಚ್ಚಾಗಿ ಉತ್ಸವಗಳ ಕಲಾಕೃತಿ ರಚಿಸುತ್ತಿದ್ದು ಕಲಾಸಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.।ಮೀನಾಕ್ಷಿ ಸದಲಗಿ ಕಲಾವಿದೆ
ಕಲಾ ಗ್ಯಾಲರಿಗಳಲ್ಲಿ ದುಬಾರಿ ಶುಲ್ಕ ನೀಡಿ ಪ್ರದರ್ಶನ ನೀಡುವುದು ಕಷ್ಟ. ಇಲ್ಲಿ ಎಲ್ಲ ರೀತಿಯ ಕಲಾಸಕ್ತರ ಜತೆ ಸಂಪರ್ಕ ಬಾಂಧವ್ಯ ಬೆಳೆಯುತ್ತದೆ.।ಪರಶುರಾಮ್ ಕಲಾವಿದ
ಕಲಾವಿದರಿಗೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದ್ದು ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ.।ಚೈತ್ರ ಮಂದಾರ ಕಲಾವಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.