ಬೆಂಗಳೂರು: ರಷ್ಯಾ ಮತ್ತು ಭಾರತೀಯ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬೆಸೆದ ಚಿತ್ರಕಲಾವಿದ ನಿಕೋಲಸ್ ರೋರಿಚ್ 150ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ‘ಸ್ಟೊಮಿನಾಯ ರೋರಿಚ್–150’ ಹೆಸರಿನಲ್ಲಿ ಅವರ ಅಪರೂಪದ 36 ಕಲಾಕೃತಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 1874ರ ಅಕ್ಟೋಬರ್ 8ರಂದು ಜನಿಸಿದ್ದ ನಿಕೋಲಸ್ ಅವರು 1920ರಲ್ಲಿ ಭಾರತಕ್ಕೆ ಬಂದು ಹಿಮಾಚಲ ಪ್ರದೇಶದ ಕುಲು ಕಣಿವೆಯ ನಗ್ಗರ್ ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. ಏಳು ಸಾವಿರಕ್ಕೂ ಅಧಿಕ ವರ್ಣಚಿತ್ರಗಳನ್ನು ರಚಿಸಿದ್ದರು. ಅವುಗಳ ಪೈಕಿ ಪ್ರದರ್ಶನಕ್ಕಿಟ್ಟಿರುವ ಹಿಮದಿಂದ ಆವೃತವಾದ ಪರ್ವತಗಳು, ನದಿಗಳ ಕಲಾಕೃತಿಗಳು ಪ್ರಮುಖ ಆಕರ್ಷಣೆಯಾಗಿವೆ.
ಅಲ್ಲದೇ ಅನ್ಯ ದೇಶಗಳ ವಸ್ತುಸಂಗ್ರಹಾಲಯಗಳಿಂದ ಸಂಗ್ರಹಿಸಿರುವ ನಿಕೋಲಸ್ ಅವರ ಪೇಂಟಿಂಗ್ ಪೋಸ್ಟ್ ಕಾರ್ಡ್‌ಗಳು, ಕ್ಯಾಲೆಂಡರ್ ಕಾರ್ಡ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅವರ ಪುತ್ರ ಸ್ವೆಟೋಸ್ಲಾವ್ ಅವರು ತನ್ನ ತಂದೆಯ ಕಲೆ ಕುರಿತು ಬರೆದಿರುವ ಡೈರಿ ಹಾಗೂ 1935ರಲ್ಲಿ ಆಂಗ್ಲ ಪತ್ರಿಕೆಯಲ್ಲಿ ನಿಕೋಲಸ್ ಕುರಿತು ಪ್ರಕಟಗೊಂಡಿರುವ ಲೇಖನ ಓದುವ ಅವಕಾಶವೂ ಇದೆ.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ನಿಕೋಲಸ್ ರೋರಿಚ್ ಅವರ ಕಲಾಕೃತಿಗಳು ಅದ್ಬುತವಾಗಿವೆ. ಅವರ ಸಾಧನೆ ಯುವ ಜನರಿಗೆ ಪ್ರೇರಣೆಯಾಗಿದೆ’ ಎಂದು ಹೇಳಿದರು.
ಚೆನ್ನೈನಲ್ಲಿ ರಷ್ಯಾದ ಕಾನ್ಸುಲ್ ಜನರಲ್ ವಲೇರಿ ಖೋಡ್ಜೇವ್ ಮಾತನಾಡಿ, ‘ನಿಕೋಲಸ್ ಜನ್ಮದಿನದ ಅಂಗವಾಗಿ ಅವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿರುವುದು ಸಂತಸ ಉಂಟು ಮಾಡಿದೆ. ಇದೇ ರೀತಿ ಕಾರ್ಯಕ್ರಮಗಳು ನಡೆಯಲಿ’ ಎಂದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ಹಿಮಾಲಯ, ಜನರು, ಅಧ್ಯಾತ್ಮ, ಪರಂಪರೆಯ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅಧ್ಯಯನಕ್ಕೆ ಮೀಸಲಾಗಿರುವ ‘ಉರುಸ್ವತಿ ಹಿಮಾಲಯನ್’ ಸಂಶೋಧನಾ ಸಂಸ್ಥೆಯನ್ನು ನಿಕೋಲಸ್ ಸ್ಥಾಪಿಸಿದ್ದರು. ಅವರ ಮಗ ಸ್ವೆಟೋಸ್ಲಾವ್ ರೋರಿಚ್ ಅವರು ಬೆಂಗಳೂರಿಗೆ ಬಂದು ವಾಸವಾಗಿದ್ದರು. ತಂದೆ ನಿಕೋಲಸ್ ಅವರು ರಚಿಸಿದ್ದ ಪ್ರಸಿದ್ಧ 36 ಚಿತ್ರಗಳ ಜೊತೆಗೆ ಸ್ವೆಟೋಸ್ಲಾವ್ ರಚಿಸಿದ್ದ 63 ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್‌ಗೆ ನೀಡಿದ್ದರು ’ ಎಂದು ಮಾಹಿತಿ ನೀಡಿದರು.
‘ಭಾರತದ ಕಲಾ ನವರತ್ನಗಳು ಎಂದು ಒಂಬತ್ತು ಶ್ರೇಷ್ಠ ಕಲಾವಿದರನ್ನು ಗುರುತಿಸಲಾಗಿದೆ. ಅದರಲ್ಲಿ ನಿಕೋಲಸ್ ರೋರಿಚ್ ಕೂಡ ಒಬ್ಬರು ಮತ್ತು ಅವರೊಬ್ಬರೇ ವಿದೇಶಿ ಕಲಾವಿದರಾಗಿದ್ದಾರೆ’ ಎಂದರು.
ಭರೂಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಎನ್. ಅಗರವಾಲ್, ಪರಿಷತ್ ಪ್ರಧಾನ ಕಾರ್ಯದರ್ಶಿ ಶಶಿಧರ ರಾವ್, ವಸ್ತು ಸಂಗ್ರಹಾಲಯದ ಮೇಲ್ವಿಚಾರಕಿ ವಿಜಯಶ್ರೀ ಹಾಜರಿದ್ದರು.
ನ.18ರವರೆಗೆ ಬೆಳಿಗ್ಗೆ 11ರಿಂದ 7ರವರೆಗೆ ಕಲಾ ಪ್ರದರ್ಶನಕ್ಕೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.