ADVERTISEMENT

ಚಿತ್ರಸಂತೆ: ಆನ್‌ಲೈನ್‌ನಲ್ಲಿಯೇ ಕಲಾಕೃತಿ ಕಣ್ತುಂಬಿಕೊಂಡ ಕಲಾರಸಿಕರು

ಲಕ್ಷಾಂತರ ಜನರಿಂದ ವೀಕ್ಷಣೆ | ಮತ್ತೊಮ್ಮೆ ಭೌತಿಕವಾಗಿ ಚಿತ್ರಸಂತೆ ನಡೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 18:40 IST
Last Updated 3 ಜನವರಿ 2021, 18:40 IST
ಕಾರ್ಯಕ್ರಮದಲ್ಲಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಡಾ. ಚೂಡಾಮಣಿ ಚಂದ್ರಶೇಖರ್‌ ಅವರಿಗೆ ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಪ.ಸ. ಕುಮಾರ್‌ ಅವರಿಗೆ ಡಿ. ದೇವರಾಜು ಅರಸು ಪ್ರಶಸ್ತಿ ಪ್ರದಾನ ಮಾಡಿದರು. ಬಿ.ಎಲ್. ಶಂಕರ್, ಪಿ.ಸಿ. ಮೋಹನ್, ಎಸ್.ಟಿ. ಸೋಮಶೇಖರ್, ಎಸ್.ಎಂ. ಕೃಷ್ಣ, ಡಾ. ಸಿ.ಎನ್. ಮಂಜುನಾಥ್, ರಿಜ್ವಾನ್‌ ಅರ್ಷದ್ ಇದ್ದಾರೆ ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಡಾ. ಚೂಡಾಮಣಿ ಚಂದ್ರಶೇಖರ್‌ ಅವರಿಗೆ ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಪ.ಸ. ಕುಮಾರ್‌ ಅವರಿಗೆ ಡಿ. ದೇವರಾಜು ಅರಸು ಪ್ರಶಸ್ತಿ ಪ್ರದಾನ ಮಾಡಿದರು. ಬಿ.ಎಲ್. ಶಂಕರ್, ಪಿ.ಸಿ. ಮೋಹನ್, ಎಸ್.ಟಿ. ಸೋಮಶೇಖರ್, ಎಸ್.ಎಂ. ಕೃಷ್ಣ, ಡಾ. ಸಿ.ಎನ್. ಮಂಜುನಾಥ್, ರಿಜ್ವಾನ್‌ ಅರ್ಷದ್ ಇದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾಲಿಡಲೂ ಆಗದಷ್ಟು ಜನಜಂಗುಳಿ ಇರುತ್ತಿದ್ದ ಚಿತ್ರಸಂತೆಯಲ್ಲಿ ಈ ಬಾರಿ ಬೆರಳೆಣಿಕೆಯಷ್ಟು ಜನರಿದ್ದರು. ಆದರೆ, ಆನ್‌ಲೈನ್‌ನಲ್ಲಿ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಕಲಾಕೃತಿಗಳನ್ನು ಹತ್ತಿರದಿಂದ ನೋಡಿ, ಮುಟ್ಟಿ ಆನಂದ ಪಡುತ್ತಿದ್ದ ಚಿತ್ರರಸಿಕರಿಗೆ ಈ ಬಾರಿ ವಿಭಿನ್ನ ಅನುಭವವಾಯಿತು. ಸೆಕೆಂಡ್‌ಗೆ 84 ಜನರಂತೆ, ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಕಾರ್ಯಕ್ರಮ ವೀಕ್ಷಿಸಿದ್ದರು.

ಕರ್ನಾಟಕ ಚಿತ್ರಕಲಾ ಪರಿಷತ್‌ನಿಂದ ನಗರದಲ್ಲಿ ಆಯೋಜಿಸಲಾಗಿದ್ದ 18ನೇ ಚಿತ್ರಸಂತೆಗೆ ಭಾನುವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಇನ್ಫೊಸಿಸ್‌ ಮುಖ್ಯಸ್ಥರಾದ ಸುಧಾಮೂರ್ತಿ, ‘ಚಿತ್ರಸಂತೆಯಲ್ಲಿ ನೇರವಾಗಿ ಭಾಗವಹಿಸುವುದಕ್ಕೂ ಆನ್‌ಲೈನ್‌ ಮೂಲಕ ಪಾಲ್ಗೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆನ್‌ಲೈನ್‌ನಲ್ಲಿ ನೋಡುವುದು ಸಂತೆಯ ಅನುಭವ ನೀಡುವುದಿಲ್ಲ. ಕೋವಿಡ್‌ ತೀವ್ರತೆ ಕಡಿಮೆಯಾದ ನಂತರ ಬೇಸಿಗೆಗೆ ಮುನ್ನ ಮತ್ತೊಮ್ಮೆ ಭೌತಿಕವಾಗಿ ಚಿತ್ರಸಂತೆಯನ್ನು ಪರಿಷತ್‌ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಹಿಂದಿನ ಕಾಲದಲ್ಲಿ ಚಿತ್ರ ಕಲಾವಿದರು, ಸಂಗೀತಗಾರರಿಗೆ ರಾಜಾಶ್ರಯ ಇರುತ್ತಿತ್ತು. ಈಗ ಸಮಾಜವೇ ಕಲಾವಿದರಿಗೆ ಆಶ್ರಯ ನೀಡಬೇಕು. ಕೋವಿಡ್‌ನಿಂದ ಚಿತ್ರಕಲಾವಿದರೂ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡುವ ಕೆಲಸವಾಗಬೇಕು. ಕಲಾವಿದರಿಗೆ ನನ್ನಿಂದ ಯಾವ ರೀತಿಯ ಸಹಾಯ ಬೇಕಾಗುತ್ತದೆ ಎಂದು ತಿಳಿಸಿದರೆ, ನೆರವು ನೀಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಚಿತ್ರಕಲಾ ಪರಿಷತ್‌ ಟ್ರಸ್ಟ್‌ ಅಧ್ಯಕ್ಷ ಎಸ್.ಎಂ. ಕೃಷ್ಣ, ‘ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಈಗ ಚಿತ್ರಕಲಾ ಪರಿಷತ್‌ ಇರುವ ಜಾಗವನ್ನು ಸರ್ಕಾರಿ ವಾಹನ ಚಾಲಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರು. ನಂತರ, ಏನಾದರೂ ನೆನಪಿನಲ್ಲಿ ಉಳಿಯುವಂತಹ ಕಾರ್ಯ ಆಗಬೇಕು ಎಂಬ ಉದ್ದೇಶದಿಂದ ಪರಿಷತ್‌ ನಿರ್ಮಾಣ ಮಾಡಲಾಯಿತು’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿತ್ರಕಲಾ ಪರಿಷತ್‌ ಅಭಿವೃದ್ಧಿಗೆ ₹2 ಕೋಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳದಿದ್ದರೆ ಅದು ಪಾಪದ ಕೆಲಸವಾಗುತ್ತದೆ’ ಎಂದರು.

ಉಪಮುಖ್ಯಮಂತ್ರಿ, ಉನ್ನತಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ‘ಸಮಾಜದಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಚಿತ್ರಕಲಾ ಕಾಲೇಜುಗಳೂ ಈ ಎನ್‌ಇಪಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಚಿತ್ರಸಂತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹1 ಕೋಟಿ ಘೋಷಿಸಿದ್ದಾರೆ. ಅದನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ಪರಿಷತ್‌ನ ಅಧ್ಯಕ್ಷ ಬಿ.ಎಲ್. ಶಂಕರ್‌, ‘ನೇರವಾಗಿ ಹೆಚ್ಚು ಜನ ಸೇರಲು ಸಾಧ್ಯವಾಗದಿದ್ದರೂ ಆನ್‌ಲೈನ್‌ನಲ್ಲಿ ಹೆಚ್ಚು ಸ್ಪಂದನೆ ವ್ಯಕ್ತವಾಗಿದೆ’ ಎಂದರು.

ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪಿ.ಸಿ.ಮೋಹನ್‌, ಶಾಸಕ ರಿಜ್ವಾನ್‌ ಅರ್ಷದ್‌, ಚಿತ್ರಕಲಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್.ಅಪ್ಪಾಜಯ್ಯ, ಪ್ರಾಂಶುಪಾಲ ಪ್ರೊ.ತೇಜೇಂದ್ರ ಸಿಂಗ್‌ ಬಾವ್ನಿ ಉಪಸ್ಥಿತರಿದ್ದರು.

ಒಂದು ತಿಂಗಳು ಚಿತ್ರಸಂತೆ ನಡೆಯಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಯೂಟ್ಯೂಬ್ ಹಾಗೂ https://www.karnatakachitrakalaparishath.com/chitra-santhe/ ವೆಬ್‌ಸೈಟ್‌ನಲ್ಲಿ ಕಲಾಕೃತಿಗಳನ್ನು ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.