ಬೆಂಗಳೂರು: ನಗರದಲ್ಲಿ ಕಾಲರಾ ಪ್ರಕರಣಗಳು ದೃಢಪಟ್ಟಿದ್ದರಿಂದ ಶುದ್ಧ ಕುಡಿಯುವ ನೀರಿನ ಸೇವನೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಬೇಸಿಗೆಯಲ್ಲಿ ಕುಡಿಯುವ ನೀರಿನಿಂದ ವಾಂತಿ–ಭೇದಿ, ಕಾಲರಾ, ಕರುಳು ಬೇನೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತವೆ. ಹೀಗಾಗಿ, ರೋಗಗಳ ಹರಡುವಿಕೆ ತಡೆಗೆ ಕುಡಿಯುವ ನೀರು ಪರಿಶೀಲನೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.
ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಕಾಲರಾ ಸೋಂಕು ಕಲುಷಿತ ನೀರು ಸೇವನೆ ಹಾಗೂ ಬೀದಿ ಬದಿ ತೆರೆದಿಟ್ಟ ಆಹಾರ ಸೇವನೆಯಿಂದ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ವ್ಯಕ್ತಿಯ ದೇಹದಲ್ಲಿ ವಾಂತಿ, ಭೇದಿ, ನಿರ್ಜಲೀಕರಣ, ಅತಿಸಾರ ಉಂಟಾಗಿ, ವ್ಯಕ್ತಿಯು ನಿತ್ರಾಣಗೊಳ್ಳುತ್ತಾನೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಸೋಂಕಿನಿಂದ ಚೇತರಿಸಿಕೊಳ್ಳಬಹುದು ಎಂದು ತಿಳಿಸಿದೆ.
ವಾಂತಿ ಭೇದಿ
ನಿಶ್ಶಕ್ತಿ
ನಿರ್ಜಲೀಕರಣ
ಮೂತ್ರವಿಸರ್ಜನೆ ಆಗದಿರುವುದು
ವಿಪರೀತ ಬಾಯಾರಿಕೆ
ಸುಸ್ತು
ಅತಿಯಾದ ನಿದ್ದೆ
ತಲೆನೋವು
ತೂಕ ಇಳಿಕೆಯಂತಹ ಲಕ್ಷಣಗಳು ಕಾಲರಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ.
ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು
ಶೌಚಾಲಯವನ್ನು ಬಳಸಿದ ಮೇಲೆ ಹಾಗೂ ಆಹಾರವನ್ನು ಸೇವಿಸುವ ಮೊದಲು ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
ಮನೆಯ ಆಹಾರ ಸೇವನೆಗೆ ಆದ್ಯತೆ ನೀಡಬೇಕು.
ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು
ಇಲಾಖೆಯು ಕಾಲರಾ ಬಗ್ಗೆ ನಿಗಾ ಇರಿಸಿದೆ. ಈ ರೋಗದ ಬಗ್ಗೆ ಆತಂಕಕ್ಕೆ ಒಳಗಾಗದೆ ಮುನ್ನೆಚ್ಚರಿಕೆ ಅನುಸರಿಸಬೇಕು. ಚಿಕಿತ್ಸೆಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.