ADVERTISEMENT

ಚರ್ಚ್‌ಸ್ಟ್ರೀಟ್: ಪಾನಮತ್ತ ಯುವತಿ ರಂಪಾಟ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 16:07 IST
Last Updated 6 ಆಗಸ್ಟ್ 2023, 16:07 IST
   

ಬೆಂಗಳೂರು: ಪಾನಮತ್ತ ಯುವತಿಯೊಬ್ಬರು ಚರ್ಚ್‌ಸ್ಟ್ರೀಟ್‌ನಲ್ಲಿ ರಂಪಾಟ ಮಾಡಿ ಪೊಲೀಸರು ಹಾಗೂ ಸ್ಥಳೀಯರನ್ನು ತಳ್ಳಾಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಖಾಸಗಿ ಕಂಪನಿ ಉದ್ಯೋಗಿ ಎನ್ನಲಾದ ಯುವತಿ, ಸ್ನೇಹಿತರ ಜೊತೆ ಶನಿವಾರ ರಾತ್ರಿ ಚರ್ಚ್‌ಸ್ಟ್ರೀಟ್‌ಗೆ ಬಂದಿದ್ದರು. ವಿಪರೀತ ಮದ್ಯ ಕುಡಿದಿದ್ದರು. ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇದಾದ ನಂತರ, ಯುವತಿ ರಸ್ತೆಯಲ್ಲಿ ನಿಂತುಕೊಂಡು ಕೂಗಾಡುತ್ತಿದ್ದರು. ಪೊಲೀಸರ ಜೊತೆಯೂ ವಾಗ್ವಾದ ನಡೆಸಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಸ್ನೇಹಿತರ ಮೂಲಕ ಯುವತಿಯನ್ನು ಮನೆಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ಆಟೊವೊಂದನ್ನು ಸ್ಥಳಕ್ಕೆ ಕರೆಸಿದ್ದರು. ಆಟೊ ಹತ್ತಲು ನಿರಾಕರಿಸಿದ ಯುವತಿ, ರಸ್ತೆಯಲ್ಲೆಲ್ಲ ಓಡಾಡಿದರು. ಸ್ನೇಹಿತರ ಜೊತೆಯೂ ಗಲಾಟೆ ಮಾಡಿ, ತಳ್ಳಿದರು.’

ADVERTISEMENT

‘ಮನೆಗೆ ಹೋಗಿ’ ಎಂದು ಸ್ಥಳೀಯರು ಬುದ್ದಿವಾದ ಹೇಳಿದ್ದರು. ಅವರ ಮೇಲೆಯೂ ಯುವತಿ ಹಲ್ಲೆಗೆ ಯತ್ನಿಸಿದ್ದರು. ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಇರದಿದ್ದರಿಂದ, ಪುರುಷ ಸಿಬ್ಬಂದಿ ಯುವತಿಯನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು’ ಎಂದರು.

‘ಒಂದು ಗಂಟೆಯ ನಂತರ ಯುವತಿ ಮನವೋಲಿಸಿದ ಪೊಲೀಸರು ಆಟೊದಲ್ಲಿ ಮನೆಗೆ ಕಳುಹಿಸಿಕೊಟ್ಟರು. ಘಟನೆಯಿಂದಾಗಿ ಚರ್ಚ್‌ಸ್ಟ್ರೀಟ್‌ನಲ್ಲಿ ಕೆಲ ನಿಮಿಷ ವಾಹನಗಳ ದಟ್ಟಣೆ ಉಂಟಾಗಿತ್ತು’ ಎಂದು ಪ್ರತ್ಯಕ್ಷದರ್ಶಿ ಹೇಳಿದರು.

‘ಯುವತಿ ಹಾಗೂ ಸ್ನೇಹಿತೆಯರು, ಕಾರಿನಲ್ಲಿ ಬಂದಿದ್ದರು. ಸಂಚಾರ ನಿಯಮ ಉಲ್ಲಂಘಿಸಿದ್ದರು. ಇದೇ ವಿಚಾರವಾಗಿ ಯುವತಿ ರಂಪಾಟ ಮಾಡಿದ್ದರು. ಸಂಚಾರ ನಿಯಮ ಉಲ್ಲಂಘನೆ ಸಮೇತ ದಂಡ ವಿಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.