ಬೆಂಗಳೂರು:ಈಗಾಗಲೇ ತನಿಖೆ ಮುಕ್ತಾಯಗೊಳಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೆತ್ತಿಕೊಳ್ಳಬಹುದೇ? ಇಂಥ ಪ್ರಶ್ನೆ ಸಿಐಡಿ ಅಧಿಕಾರಿಗಳನ್ನು ಕಾಡುತ್ತಿದೆ.
ಈ ಬಗ್ಗೆ ಸಲಹೆ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆ ಪತ್ರವನ್ನು ಗೃಹ ಇಲಾಖೆ ಮೂಲಕ ಕಾನೂನು ತಜ್ಞರ ಪರಿಶೀಲನೆಗೆ ಕಳುಹಿಸಲಾಗಿದೆ.
ಲಕ್ಷಾಂತರ ಠೇವಣಿದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪವಿರುವ ಕಂಪನಿಗಳ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಇತ್ತೀಚೆಗಷ್ಟೇ ಆದೇಶ ಹೊರಡಿಸಿದ್ದು, ಇದೀಗ ಪ್ರಕರಣಗಳ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೆಲ ಗೊಂದಲಗಳು ಉಲ್ಭಣಿಸಿವೆ.
ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ಸಿಐಡಿ ಮೂಲಗಳು ಹೇಳಿವೆ.
‘ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿ. ಹಾಗೂ ಇಂಜಾಜ್ ಇಂಟರ್‌ನ್ಯಾಷನಲ್ ಸೇರಿದಂತೆ 10 ಕಂಪನಿಗಳ ವಿರುದ್ಧದಾಖಲಾಗಿದ್ದ ವಂಚನೆ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಇಂಥ ಪ್ರಕರಣಗಳ ಹಸ್ತಾಂತರ ಸಂಬಂಧ ಸಿಸಿಬಿ ಹಾಗೂ ಸಿಐಡಿ ಅಧಿಕಾರಿಗಳ ನಡುವೆ ಈಗಾಗಲೇ ಒಂದು ಸುತ್ತಿನ ಸಭೆ ಆಗಿದೆ. ಗೊಂದಲಗಳ ಬಗ್ಗೆಯೂ ಚರ್ಚಿಸಲಾಗಿದೆ’ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿ ಹಲವು ತಿಂಗಳಾಗಿದೆ. ಅವೆಲ್ಲವೂ ಗಂಭೀರ ಪ್ರಕರಣ ಆಗಿದ್ದರಿಂದ ಸಿಸಿಬಿ ಅಧಿಕಾರಿಗಳೇ ಅವುಗಳ ತನಿಖೆ ಮಾಡಿ ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದಾರೆ.
ಈಗ ಏಕಾಏಕಿ ಪ್ರಕರಣಗಳನ್ನು ಸಿಐಡಿಗೆ ವಹಿಸಿದ್ದು, ಯಾವ ರೀತಿಯ ತನಿಖೆ ನಡೆಸಬೇಕೆಂಬ ಪ್ರಶ್ನೆ ಸಿಐಡಿ ಅಧಿಕಾರಿಗಳಲ್ಲಿ ಇದೆ. ಈ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು’ ಎಂದು ಅವರು ವಿವರಿಸಿದರು.
ಸಲಹೆ ಕೋರಿದ ಡಿಜಿಪಿ: ಪ್ರಕರಣಗಳ ಹಸ್ತಾಂತರ ಸಂಬಂಧ ಹೊರಡಿಸಿದ್ದ ಆದೇಶಕ್ಕೆ ಪ್ರತಿಯಾಗಿ ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಇತ್ತೀಚೆಗಷ್ಟೇ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿ. ಹಾಗೂ ಇಂಜಾಜ್ ಇಂಟರ್‌ನ್ಯಾಷನಲ್ ಕಂಪನಿ ವಿರುದ್ಧದ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ.
ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ತನಿಖಾಧಿಕಾರಿ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇಂಥ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ, ರಾಜ್ಯ ಸರ್ಕಾರದ 1974ರ ಆದೇಶದಂತೆ ರಚನೆಯಾಗಿರುವ ಸಿಐಡಿ ಸಂಸ್ಥೆಗೆ ಇದೆಯೇ. ಇದ್ದರೆ ಸಲಹೆ ನೀಡಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣ ದಾಖಲಾಗಿದ್ದ ಕೆಲ ಕಂಪನಿಗಳು
ಆ್ಯಂಬಿಡೆಂಟ್ ಮಾರ್ಕೆಟಿಂಗ್, ಇಂಜಾಜ್ ಇಂಟರ್‌ನ್ಯಾಷನಲ್, ಬರಾಕ್ ಯೂನಿಟಿ ಲಿ., ಎಸ್.ಆರ್. ಬ್ಲೂ ಚಿಪ್ಸ್, ಏಮ್ಸ್ ವೆಂಚರ್, ಅಜ್ಮೀರಾ ಗ್ರೂಪ್,ನಫಿಯಾ ಟೂರ್ಸ್ ಅಂಡ್ ಅಂಡ್ ಟ್ರಾವೆಲ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.