ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡವು ನಿಗಮದ ಕಚೇರಿ ಸೇರಿದಂತೆ ಹಲವು ಸ್ಥಳಗಳ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ.
ವಿ.ವಿ. ಟವರ್ ಬಳಿಯಿರುವ ಕಚೇರಿಯಲ್ಲಿ ತಡರಾತ್ರಿವರೆಗೆ ಪರಿಶೀಲನೆ ನಡೆಸಿದ ಸಿಐಡಿ ತಂಡವು ಕಂಪ್ಯೂಟರ್ ಹಾಗೂ ಕೆಲವು ಕಡತಗಳನ್ನು ಜಪ್ತಿ ಮಾಡಿಕೊಂಡಿದೆ. ಅಲ್ಲದೇ, ಸಿಬ್ಬಂದಿ ಹಾಗೂ ಅಧಿಕಾರಿಗಳ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ
ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳ ಅಡಿ ಲಕ್ಷಾಂತರ ರೂಪಾಯಿ ಮೊತ್ತದ ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿತ್ತು. ಆ ಮಾಹಿತಿ ಆಧರಿಸಿ ಹಲವು ಕಡೆ ಪರಿಶೀಲನೆ ನಡೆಸಲಾಗುತ್ತಿದೆ.
₹60 ಕೋಟಿಗೂ ಹೆಚ್ಚು ಅಕ್ರಮ: ಪ್ರಾಥಮಿಕ ತನಿಖೆಯಲ್ಲಿ ₹60 ಕೋಟಿಗೂ ಹೆಚ್ಚು ಅಕ್ರಮ ನಡೆದಿರುವ ಮಾಹಿತಿ ಸಿಐಡಿಗೆ ಸಿಕ್ಕಿದ್ದು, ತನಿಖೆ ಮುಂದುವರೆದಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣದ ಪ್ರಮುಖ ಆರೋಪಿ, ಮಹಾಲಕ್ಷ್ಮಿಪುರದ ಭೋವಿಪಾಳ್ಯದ ನಿಗಮದ ಕಚೇರಿಯಲ್ಲಿ 2021ರ ಏಪ್ರಿಲ್ 5ರಿಂದ 2022ರ ಜುಲೈ 8ರವರೆಗೆ ಕಚೇರಿ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರನ್ನು ಕಳೆದ ತಿಂಗಳ ಸಿಐಡಿ ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿತ್ತು. ಅಲ್ಲದೇ ತಲೆಮರೆಸಿಕೊಂಡಿರುವ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ. ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಅವರ ಪತ್ತೆಗೆ ಶೋಧ ಮುಂದುವರೆಸಲಾಗಿದೆ ಎಂದು ಮೂಲಗಳು ಹೇಳಿವೆ. ಲೋಕಾಯುಕ್ತ ಮತ್ತು ಸಿಐಡಿ ತನಿಖೆ ನಡೆಸುತ್ತಿರುವ ಮಧ್ಯೆಯೇ, ನಿಗಮವು ಸ್ವತಂತ್ರ ಲೆಕ್ಕ ಪರಿಶೋಧನಾ ಕಂಪನಿಯಿಂದ ಲೆಕ್ಕ ಪರಿಶೋಧನೆ ನಡೆಸಿದೆ. ಆ ತನಿಖೆಯಲ್ಲೂ ಅಕ್ರಮ ನಡೆದಿರುವುದು ಪತ್ತೆಯಾಗಿತ್ತು ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.